ಗೋಣಿಕೊಪ್ಪ ವರದಿ, ಸೆ. ೨: ಅತ್ಯಾಚಾರಕ್ಕೆ ಒಳಗಾಗಿದ್ದ ಸಂತ್ರಸ್ತೆ ಹೆಸರು ಮತ್ತು ಭಾವಚಿತ್ರ ಬಳಸಿದ ಆರೋಪದಡಿ ಪ್ರಕಟಗೊಳ್ಳುತ್ತಿದ್ದ ಕಾವೇರಿ ಟೈಮ್ಸ್ ಪತ್ರಿಕೆಯ ಸಂಪಾದಕ ಮತ್ತು ವರದಿಗಾರನ ಮೇಲೆ ವೀರಾಜಪೇಟೆ ೨ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದೆ.

ಇದರಂತೆ ಆರೋಪಿಗಳಿಗೆ ೧ ವರ್ಷದ ಸಜೆ ಮತ್ತು ತಲಾ ೨೫ ಸಾವಿರ ದಂಡ ವಿಧಿಸಿ ಆದೇಶಿಸಿದೆ. ತಪ್ಪಿದ್ದಲ್ಲಿ ೩ ತಿಂಗಳ ಸಜೆಯನ್ನು ವಿಧಿಸಿದ್ದು, ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ನೀಡಿದೆ.

ಪತ್ರಿಕೆಯ ಸಂಪಾದಕ ನಂಜಪ್ಪ ಮತ್ತು ವರದಿಗಾರ ವಸಂತ್‌ಕುಮಾರ್ ದೋಷಿಗಳಾಗಿದ್ದಾರೆ.೨೦೧೯ರಲ್ಲಿ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತೆ ಮೇಲೆ ದುಷ್ಕರ್ಮಿಗಳು ಅತ್ಯಾಚಾರವೆಸಗಿ ಕೊಲೆ ಮಾಡಿದ್ದರು. ಈ ಪ್ರಕರಣದಲ್ಲಿ ಅಪ್ರಾಪ್ತೆ ಎಂದು ತಿಳಿದಿದ್ದರೂ ಭಾವಚಿತ್ರ ಸಮೇತ ಕಾನೂನು ವಿರುದ್ಧ ವರದಿ ಮಾಡಿದ್ದರು ಎಂದು ಮೃತ ಬಾಲಕಿ ಸಹೋದರ ಪತ್ರಿಕೆ ವಿರುದ್ಧ ದೂರು ನೀಡಿದ್ದರು. ತನಿಖಾಧಿಕಾರಿಯಾಗಿ ಅಂದಿನ ಗೋಣಿಕೊಪ್ಪ ಪಿಎಸ್‌ಐ ಬಿ.ಎಸ್. ಶ್ರೀಧರ್ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ನೀಡಿದ್ದರು. ಇದರಂತೆ ವಿಚಾರಣೆ ನಡೆದು ಆಗಸ್ಟ್ ೨೮ ರಂದು ತೀರ್ಪು ನೀಡಿದೆ. ವಿಶೇಷ ಸರ್ಕಾರಿ ಅಭಿಯೋಜಕರಾಗಿ ಯಾಸಿನ್ ಅಹಮ್ಮದ್ ವಾದ ಮಂಡಿಸಿದ್ದರು.