ಶನಿವಾರಸಂತೆ, ಸೆ. ೨: ವಿಜ್ಞಾನ ವರವೂ ಹೌದು; ಶಾಪವೂ ಹೌದು. ಮೌಢ್ಯ ಮನೋಭಾವ ತ್ಯಜಿಸಿ, ವೈಜ್ಞಾನಿಕ ಮನೋಭಾವ ಮೂಡಿಸಿಕೊಂಡರೆ ವಿಜ್ಞಾನವನ್ನು ವರವಾಗಿಸಿಕೊಳ್ಳಬಹುದು ಎಂದು ಕೊಡ್ಲಿಪೇಟೆಯ ಸೇಂಟ್ ಆನ್ಸ್ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆ ಮುಖ್ಯ ಶಿಕ್ಷಕಿ ಸಿಸ್ಟರ್ ವಿಲ್ಮಾ ಅಭಿಪ್ರಾಯ ವ್ಯಕ್ತಪಡಿಸಿದರು. ಕೊಡ್ಲಿಪೇಟೆಯ ಸೇಂಟ್ ಆನ್ಸ್ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಂದ ನಡೆದ ವಿಜ್ಞಾನ ಮಾದರಿ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮುಖ್ಯ ಅತಿಥಿ ಉದ್ಯಮಿ ರಘು ಮಾತನಾಡಿ, ಶಾಲೆಗಳಲ್ಲಿ ಇಂತಹ ವಿಜ್ಞಾನ ಮಾದರಿ ವಸ್ತು ಪ್ರದರ್ಶನವನ್ನು ಏರ್ಪಡಿಸುವುದರಿಂದ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವದ ಜತೆಗೆ ತಂತ್ರಜ್ಞಾನದ ಬಗ್ಗೆಯೂ ಜ್ಞಾನ ವೃದ್ಧಿಸಲಿದೆ ಎಂದರು.

ಶಾಲೆಯ ೧ನೇ ತರಗತಿಯಿಂದ ೧೦ನೇ ತರಗತಿಯವರೆಗಿನ ವಿದ್ಯಾರ್ಥಿಗಳು ವಿಜ್ಞಾನದ ಮಾದರಿಗಳನ್ನು ಪ್ರದರ್ಶಿಸಿ ತಮ್ಮ ಪ್ರತಿಭೆಯನ್ನು ಮೆರೆದರು. ವಿದ್ಯಾರ್ಥಿಗಳಾದ ಶರ್ಮಿತಾ, ಪ್ರೀತಂ, ಹೆಚ್.ಎಂ. ಬಿಂದು ವಿಜ್ಞಾನದ ಮಹತ್ವದ ಕುರಿತು ಮಾತನಾಡಿದರು. ಮಕ್ಕಳ ವಿಜ್ಞಾನ ಪ್ರದರ್ಶನವನ್ನು ವೀಕ್ಷಿಸಿದ ಪೋಷಕರು, ಗ್ರಾಮಸ್ಥರು ಹಾಗೂ ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿ ಪ್ರೋತ್ಸಾಹಿಸಿದರು.