ಮಡಿಕೇರಿ, ಸೆ. ೨: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಚಿನ್ನದ ಅಂಬಾರಿ ಹೊರುವ ಸುವರ್ಣಾವಕಾಶ ಈ ಬಾರಿ ಕೊಡಗು ಜಿಲ್ಲೆಯ ದುಬಾರೆ ಶಿಬಿರದ ಕಂಜನ್ ಎಂಬ ೨೪ ರ ಹರೆಯದ ಸಾಕಾನೆಗೆ ಬರುವ ಸಾಧ್ಯತೆ ದಟ್ಟವಾಗಿದೆ.

ಇದರಿಂದಾಗಿ ಕಂಜನ್ ಸಾಕಾನೆಯ ಮೇಲೆ ದಸರಾ ಮಹೋತ್ಸವದ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಅಪಾರ ನಿರೀಕ್ಷೆ ಹೊಂದಿದ್ದಾರೆ ಎನ್ನಲಾಗುತ್ತಿದೆ.

ಕಳೆದ ವರ್ಷ ಪ್ರಪ್ರಥಮ ಬಾರಿಗೆ ಯಶಸ್ವಿಯಾಗಿ ಅಂಬಾರಿಯನ್ನು ಹೊತ್ತಿದ್ದ ರಾಂಪುರ ಸಾಕಾನೆ ಶಿಬಿರದ ೨೦ ರ ಪ್ರಾಯದ ಪಾರ್ಥಸಾರಥಿ ಎಂಬ ಸಾಕಾನೆ ಮದವೇರಿದ ಲಕ್ಷಣ ಕಂಡುಬAದಿರುವ ಹಿನ್ನೆಲೆಯಲ್ಲಿ ದಸರಾ ಮಹೋತ್ಸವದ ತಾಲೀಮಿ ನಿಂದ ಪಾರ್ಥ ಸಾರಥಿಯನ್ನು ಕೈಬಿಡ ಲಾಗಿದೆ. ಹಾಗಾಗಿ ಪಾರ್ಥಸಾರಥಿಯ ಸ್ಥಾನ ತುಂಬಲು ದುಬಾರೆಯ ಸಾಕಾನೆ ಶಿಬಿರದಲ್ಲಿನ ಕಂಜನ್‌ಗೆ ಅಧಿಕಾರಿಗಳು ದುಂಬಾಲು ಬಿದ್ದಿದ್ದಾರೆ.

ಕಳೆದ ಮೂರು ದಿನಗಳ ಹಿಂದಷ್ಟೇ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ದುಬಾರೆಯಿಂದ ವೀರನಹೊಸಹಳ್ಳಿಗೆ ಪ್ರಯಾಣ ಬೆಳೆಸಿರುವ ಕಂಜನ್ ಶಿಬಿರದ ತನ್ನ ಸಹಪಾಠಿ ೬೩ ವಯಸ್ಸಿನ ಹಿರಿಯಕ್ಕ ವಿಜಯ, ೪೫ ರ ಪ್ರಾಯದ ಸೋದರ ಧನಂಜಯ, ಹಾಗೂ ೪೧ ರ ಪ್ರಾಯದ ಗೋಪಿಯೊಂದಿಗೆ ಈ ೨೪ ರ ಹರೆಯದ ಕಂಜನ್ ಮೈಸೂರಿನ ಅರಣ್ಯ ಭವನದ ಆವರಣದಲ್ಲಿ ಮೈಸೂರು ಜಿಲ್ಲಾಡಳಿತ ಏರ್ಪಡಿಸಿರುವ ತಿಂಗಳ ಅವಧಿಯ ರಾಜಾತಿಥ್ಯದಲ್ಲಿ ಭಾಗಿಯಾಗಿದ್ದಾನೆ.

(ಮೊದಲ ಪುಟದಿಂದ) ಬಳಿಕ ತಾ.೫ ರಂದು ಅರಣ್ಯ ಭವನದಿಂದ ಮೈಸೂರು ಅರಮನೆ ಆವರಣಕ್ಕೆ ಈ ಕಂಜನ್ ಸಹಿತ ಇತರೇ ಸಹಪಾಠಿಗಳು ಪ್ರಯಾಣ ಬೆಳೆಸಲಿ ದ್ದಾರೆ ಎಂದು ಅಧಿಕಾರಿ ಯೊಬ್ಬರು ‘ಶಕ್ತಿ’ಯೊಂದಿಗೆ ಮಾಹಿತಿ ನೀಡಿದ್ದಾರೆ.

ಯಾರೀ ಕಂಜನ್......?

ತನ್ನ ಹದಿಹರೆಯದ ೧೫ನೇ ವಯಸ್ಸಿನಲ್ಲಿ ಪುಂಡಾಟಿಕೆಯೊAದಿಗೆ ಸಕಲೇಶಪುರದ ಆಲೂರು ಆಸುಪಾಸಿನಲ್ಲಿ ಕೃಷಿಕರಿಗೆ ಉಪಟಳ ನೀಡುತ್ತಿದ್ದ ಈ ಆನೆಯನ್ನು ೨೦೧೪ರಲ್ಲಿ ಸೆರೆಹಿಡಿದು ದುಬಾರೆ ಸಾಕಾನೆ ಶಿಬಿರಕ್ಕೆ ತಂದು ಪಳಗಿಸಲಾಗಿತ್ತು.

ಬಳಿಕ ಒಂದೆರಡು ವರ್ಷಗಳಲ್ಲಿ ಶಿಬಿರದ ಮಾವುತ ಹಾಗೂ ಕಾವಾಡಿಗಳ ಹಿಡಿತಕ್ಕೆ ಬಂದ ಕಂಜನ್, ಈಗಾಗಲೇ ಕೃಷಿಕರ ಹೊಲ ಗದ್ದೆಗಳಿಗೆ ಲಗ್ಗೆಯಿಟ್ಟು ಅಟ್ಟಹಾಸ ತೋರುವ ಕಾಡಾನೆಗಳ ಸೆರೆ ಹಾಗೂ ಅವುಗಳನ್ನು ಕಾಡಿಗೆ ಮರಳಿಸುವ ಕಾಯಕದಲ್ಲಿ ಸಕ್ರಿಯವಾಗಿ ನಿರತನಾಗಿದ್ದ. ಅಷ್ಟೇ ಅಲ್ಲ, ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲೂ ಈ ಕಂಜನ್ ಭಾಗಿಯಾಗುತ್ತಿದ್ದ.

ಹುಲಿ ಹಾಗೂ ಕಾಡಾನೆಗಳ ಸೆರೆ ಸಂದರ್ಭ ಸಿಡಿಸುವ ಪಟಾಕಿಗಳ ಸದ್ದು ಹಾಗೂ ವಾಹನಗಳ ಶಬ್ದಗಳಿಗೆ ಹೊಂದಿಕೊAಡಿರುವ ಹಿನ್ನೆಲೆಯಲ್ಲಿ ಈ ಬಾರಿ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಈ ಕಂಜನ್‌ಗೆ ತರಬೇತಿ ನೀಡಲಾಗುತ್ತದೆ.

ಅಂಬಾರಿ ಹೊರುವ ಆನೆಗೆ ಇರಬೇಕಾದ ಮುಖ ಲಕ್ಷಣವೂ ಈ ಕಂಜನ್‌ಗಿದ್ದು, ಇದರ ಎರಡು ದಂತಗಳು ನೀಳವಾಗಿವೆಯಲ್ಲದೇ ಆಕರ್ಷಣೀಯವಾಗಿವೆ.

ಹಾಗಾಗಿ ಈ ಬಾರಿ ಕಂಜನ್‌ನನ್ನು ಇದರ ಮಾವುತ ವಿಜಯ್ ಹಾಗೂ ಕಾವಾಡಿ ಮಣಿಕಂಠ ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡು ಇದರ ಲಾಲನೆ ಪಾಲನೆ ಹಾಗೂ ಪೋಷಣೆಯಲ್ಲಿ ತೊಡಗಿದ್ದಾರೆ.

ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಗಜಪಡೆ ಆಯ್ಕೆ ಪ್ರಕ್ರಿಯೆಯನ್ನು ಈ ಬಾರಿ ಸೂಕ್ಷ್ಮಾತಿ ಸೂಕ್ಷ್ಮವಾಗಿ ನಿರ್ವಹಿಸಲಾಗುತ್ತಿದೆ.

ಮಹೋತ್ಸವದಲ್ಲಿ ಭಾಗಿಯಾಗುವ ಸಂಭವನೀಯ ೧೪ ಆನೆಗಳನ್ನು ಕಡ್ಡಾಯವಾಗಿ ಪ್ರೆಗ್ನೆನ್ಸಿ ಟೆಸ್ಟ್, ಮದ ಬಂದಿರುವ ಅಥವಾ ಮದವೇರಬಹುದಾದ ಟೆಸ್ಟ್ ಸೇರಿದಂತೆ ಆರೋಗ್ಯ ಪರಿಶೀಲನೆಯನ್ನು ಮಾಡಿಸಲಾಗಿತ್ತು. ಈ ಆನೆಗಳ ಪೈಕಿ ಮೊದಲ ತಂಡದಲ್ಲಿ ಎರಡು ಹೆಣ್ಣಾನೆಗಳೊಂದಿಗೆ ೭ ಗಂಡಾನೆಗಳನ್ನು ತರಲು ನಿರ್ಧರಿಸಲಾಗಿತ್ತು.

ಮೊದಲ ತಂಡದಲ್ಲಿ ಆಗಮಿಸಲು ಅರ್ಹತೆ ಗಳಿಸಿದ್ದ ಬಂಡೀಪುರದ ರಾಂಪುರ ಶಿಬಿರದ ೨೦ ರ ಹರೆಯದ ಪಾರ್ಥಸಾರಥಿ ಗಜಪಯಣದ ಮುಖೇನ ಮೈಸೂರಿಗೆ ಧಾವಿಸಬೇಕಿತ್ತು. ಆದರೆ, ಗಜಪಯಣಕ್ಕೂ ಮೂರ್ನಾಲ್ಕು ದಿನಗಳ ಮುಂಚೆ ಪಾರ್ಥಸಾರಥಿಗೆ ಮದವೇರಿದ ಲಕ್ಷಣ ಕಂಡುಬAದ ಹಿನ್ನೆಲೆಯಲ್ಲಿ ಕೈಬಿಡಲಾಗಿದೆ. ಹಾಗಾಗಿ ದುಬಾರೆಯ ಕಂಜನ್ ಮೊದಲ ತಂಡದಲ್ಲಿಯೇ ಮೈಸೂರಿಗೆ ಧಾವಿಸಿದ್ದಾನೆ.

ಕಂಜನ್ ಮೇಲೆ ಅಪಾರ ನಿರೀಕ್ಷೆ

ದಸರಾ ಮಹೋತ್ಸವದಲ್ಲಿ ಮೊದಲ ಬಾರಿಗೆ ಭಾಗವಹಿಸುತ್ತಿರುವ ೨೪ ರ ಹರೆಯದ ದುಬಾರೆಯ ಬಹು ದುಬಾರಿಯ ಈ ಕಂಜನ್ ಮೇಲೆ ಅರಣ್ಯ ಇಲಾಖೆ ಹಾಗೂ ಮೈಸೂರು ದಸರಾ ಮಹೋತ್ಸವ ಸಮಿತಿ ಅಧಿಕಾರಿಗಳು ಅತ್ಯಂತ ಹೆಚ್ಚಿನ ನಿರೀಕ್ಷೆ ಹೊಂದಿದ್ದಾರೆ.

ಸಹಪಾಠಿಗಳ ಹುಡುಕಾಟ.....

ದಸರಾ ಮಹೋತ್ಸವದಂದು ಮೊದಲ ಬಾರಿಗೆ ಅಂಬಾರಿ ಹೊರುವ ಕಂಜನ್ ಎಡ ಹಾಗೂ ಬಲ ಬದಿಯಲ್ಲಿ ಸಾಥ್ ಕೊಡುವ ಕುಮ್ಕಿ ಆನೆಯಾಗಿ ಸಾಗುವ ಹೆಣ್ಣಾನೆಗಳ ಶೋಧ ನಡೆಯುತ್ತಿದೆ. ಕೊಡಗು, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ವಿವಿಧ ಶಿಬಿರಗಳಲ್ಲಿ ಹಲವು ಹೆಣ್ಣಾನೆಗಳಿವೆ.

ಆದರೆ, ಇರುವ ಕೆಲವು ಹೆಣ್ಣಾನೆಗಳು ಗರ್ಭವತಿಯಾಗಿದ್ದರೆ, ಮತ್ತೆ ಕೆಲವು ಪುಟ್ಟ ಮರಿಗಳನ್ನು ಹೊಂದಿವೆ. ಇದರಿಂದಾಗಿ ಹೆಣ್ಣಾನೆಗಳು ಸಿಗುತ್ತಿಲ್ಲ.

ಆದಾಗ್ಯೂ ಬಂಡೀಪುರದ ರಾಂಪುರ ಶಿಬಿರದ ಚೈತ್ರ ಎಂಬ ಆನೆ ಈ ಬಾರಿ ಗರ್ಭಿಣಿಯಾಗಿದ್ದು ದಸರಾಕ್ಕೆ ಗೈರಾಗುತ್ತಿದೆ. ಇದರ ಬದಲಾಗಿ ಅದೇ ಶಿಬಿರದ ೩೫ ವರ್ಷದ ಹಿರಣ್ಯಾ ಎಂಬ ಆನೆಯನ್ನು ಎರಡನೇ ತಂಡದಲ್ಲಿ ಮೈಸೂರಿಗೆ ಕರೆಸಿಕೊಳ್ಳಲಾಗುತ್ತದೆ.

ಆದರೆ, ಈ ಹಿರಣ್ಯಾ ಎಂಬ ಆನೆಗೆ ಅಶ್ವತ್ಥಾಮ ಎಂಬ ಎರಡು ವರ್ಷದ ಗಂಡು ಮರಿಯಿದ್ದು, ಇದಕ್ಕೆ ಎರಡು ವರ್ಷವಾಗಿರುವ ಕಾರಣ ಇದನ್ನು ತಾಯಿಯಿಂದ ಬೇರ್ಪಡಿಸಿ ಮೈಸೂರಿಗೆ ಕರೆದೊಯ್ಯುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಏನೇ ಆಗಲಿ, ಈ ಬಾರಿ ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂ ಸವಾರಿಯ ಚಿನ್ನದ ಅಂಬಾರಿಯನ್ನು ನಮ್ಮ ದುಬಾರೆಯ ಕಂಜನ್ ಹೊರುತ್ತಿದ್ದಾನೆ ಎಂಬುದಷ್ಟೇ ಸಂತಸದ ಸಂಗತಿ.