ಮುಳ್ಳೂರು, ಸೆ. ೨: ಇಲ್ಲಿನ ಮುಳ್ಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕ್ರಿಯಾಶೀಲತೆಗೆ ಹೆಸರಾಗಿದ್ದು ಶಾಲೆಯ ಸೃಜನಶೀಲ ಮುಖ್ಯ ಶಿಕ್ಷಕ ಸಿ.ಎಸ್. ಸತೀಶ್ ಶಾಲೆಯಲ್ಲಿ ಆಗಿಂದಾಗ ವಿನೂತನ ಪ್ರಯೋಗಗಳನ್ನು ಮಾಡುತ್ತಾರೆ.
ಭಾರತ ಕೃಷಿ ಪ್ರಧಾನ ದೇಶವಾಗಿದ್ದು ಕೃಷಿಯೇ ಇಲ್ಲಿಯ ಮುಖ್ಯ ಜೀವಾಳ, ಆದರೆ ಇತ್ತೀಚೆಗೆ ಹಳ್ಳಿ ಯುವಕರು ನಗರಗಳತ್ತ ಮುಖ ಮಾಡಿದ್ದು ಈ ದಿಸೆಯಲ್ಲಿ ಪೋಷಕರು ಸಹ ಐಟಿ, ಬಿಟಿಯತ್ತ ಒಲವು ತೋರಿಸುತ್ತಿದ್ದು ಮಕ್ಕಳನ್ನು ಅಲ್ಲಿಗೆ ಕಳುಹಿಸುತ್ತಿರುವ ಬೆಳವಣಿಗೆ ಹೆಚ್ಚಾಗುತ್ತಿದೆ.
ಮಕ್ಕಳನ್ನು ಕೃಷಿ ಕ್ಷೇತ್ರದತ್ತ ಸುಳಿಯಲು ಬಿಡುತ್ತಿಲ್ಲ. ಇಂತಹ ಬದಲಾಗುತ್ತಿರುವ ಸನ್ನಿವೇಶದಲ್ಲಿ ಮುಖ್ಯ ಶಿಕ್ಷಕ ಸಿ.ಎಸ್. ಸತೀಶ್, ವಿದ್ಯಾರ್ಥಿಗಳನ್ನು ಭತ್ತ ಬೆಳೆಯುವ ಗದ್ದೆಗಳಿಗೆ ಕರೆದುಕೊಂಡು ಹೋಗಿ ಗದ್ದೆಯಲ್ಲಿ ಉಳುಮೆ ಮಾಡಿದ ನಂತರ ಭತ್ತದಬೀಜ ಬಿತ್ತನೆ ಮಾಡುವ ವಿಧಾನ, ಸಸಿಗಳ ಪಟಗಳಿಂದ ನಾಟಿ ಮಾಡಲು ಸಸಿಗಳನ್ನು ಕೀಳುವುದು ಅಲ್ಲಿಂದ ಅವುಗಳನ್ನು ತೆಗೆದುಕೊಂಡು ಹೋಗಿ ನಾಟಿ ಮಾಡಲು ಸಿದ್ಧತೆ ಮಾಡಿರುವ ಗದ್ದೆಯಲ್ಲಿ ನಾಟಿ ಮಾಡುವ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು.
ವಿದ್ಯಾರ್ಥಿಗಳು ಆಸಕ್ತಿ ಮತ್ತು ಲವಲವಿಕೆಯಿಂದ ಪಾಲ್ಗೊಂಡು ನಾಟಿ ಮಾಡುವುದನ್ನು ಕಲಿತರು. ಶಿಕ್ಷಕರು ಮತ್ತು ಸ್ಥಳೀಯ ರೈತರು ಹೇಳಿಕೊಟ್ಟಂತೆ ವಿದ್ಯಾರ್ಥಿಗಳು ಸ್ವತಃ ಸಸಿಪಟದಿಂದ ಸಸಿಕಂತೆಗಳನ್ನು ಗದ್ದೆಗೆ ತೆಗೆದುಕೊಂಡು ಹೋಗಿ ನಾಟಿ ಮಾಡುವುದರ ಮೂಲಕ ಸಂಭ್ರಮ ಪಟ್ಟರು ಹಾಗೂ ನಾಟಿ ಮಾಡುವ ಬಗ್ಗೆ ಅನುಭವ ಪಡೆದುಕೊಂಡರು.