ಶ್ರೀಹರಿಕೋಟ, ಸೆ. ೨ : ಚಂದ್ರಯಾನ-೩ ಯೋಜನೆಯ ಯಶಸ್ಸಿನ ಬೆನ್ನಲ್ಲೇ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ, ಸೂರ್ಯನ ಅಧ್ಯಯನದಲ್ಲಿ ತೊಡಗಲಿರುವ ಆದಿತ್ಯ ಎಲ್-೧ ನೌಕೆಯ ಉಡಾವಣೆ ನಡೆಸಿ ಯಶಸ್ಸು ಕಂಡಿದೆ. ಇಂದು ಪೂರ್ವಾಹ್ನ ೧೧:೫೦ಕ್ಕೆ ಸರಿಯಾಗಿ ಆಂದ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವಾನ್ ಬಾಹ್ಯಾಕಾಶ ಕೇಂದ್ರದಿAದ ಪಿ.ಎಸ್.ಎಲ್.ವಿ ಎಕ್ಸ್.ಎಲ್ ಸಿ-೫೭ ರಾಕೆಟ್ ಮೂಲಕ ೭ ತಾಂತ್ರಿಕ ಪರಿಕರಗಳನ್ನು ಒಳಗೊಂಡ ಆದಿತ್ಯ ಎಲ್-೧ ನೌಕೆಯು ತನ್ನ ಪಯಣವನ್ನು ಪ್ರಾರಂಭಿಸಿತು. ಹಂತ ಹಂತವಾಗಿ ರಾಕೆಟ್‌ನ ಭಾಗಗಳು ಬೇರ್ಪಟ್ಟ ಬಳಿಕ ಒಳಗಿದ್ದ ಆದಿತ್ಯ ನೌಕೆಯನ್ನು ಸುರಕ್ಷಿತವಾಗಿ ಭೂ-ಕಕ್ಷೆಯಲ್ಲಿ ಇರಿಸಲಾಯಿತು.

೧೯,೫೦೦ ಕಿ.ಮೀ, ೨೩೫ ಕಿ.ಮೀ

ಭೂ-ಕಕ್ಷೆಯಲ್ಲಿ ಇರಿಸಲ್ಪಟ್ಟ ನೌಕೆ

ಉಡಾವಣೆಗೊಂಡ ಆದಿತ್ಯ ನೌಕೆಯನ್ನು ಇದೀಗ ಭೂಮಿಯ ಕಕ್ಷೆಯಲ್ಲಿ ಇರಿಸಲಾಗಿದೆ. ಕಕ್ಷೆಯು ಅಂಡಾಕಾರವಾಗಿದ್ದು,

(ಮೊದಲ ಪುಟದಿಂದ) ಭೂ-ಪದರದಿಂದ ಗರಿಷ್ಠ ೧೯,೫೦೦ಕಿ.ಮಿ ಹಾಗೂ ಕನಿಷ್ಟ ೨೩೫ ಕಿ.ಮೀ ದೂರದ ಕಕ್ಷೆಯಲ್ಲಿ ಚಲಿಸಲಾರಂಭಿಸಿದೆ. ನಿಶ್ಚಿತ ವೇಗ ಪಡೆದ ಬಳಿಕ ೧೦೬ ದಿನಗಳ ನಂತರ ಸೂರ್ಯ-ಭೂಮಿ ಮಾರ್ಗದ ೧೫ ಲಕ್ಷ ಕಿ.ಮಿ ದೂರದಲ್ಲಿನ ಎಲ್-೧ ಪಾಯಿಂಟ್‌ನೆಡೆಗೆ ನೌಕೆ ತೆರಳಲಿದೆ. ಒಟ್ಟು ಪಯಣ ೧೨೫ ದಿನಗಳದ್ದಾಗಲಿದೆ.

೧ ಗಂಟೆ ಬಳಿಕ ಬೇರ್ಪಟ್ಟ ನೌಕೆ - ಪಿ.ಎಸ್.ಎಲ್.ವಿ ಅತಿದೀರ್ಘ ಪಯಣ

ಸಾಮಾನ್ಯವಾಗಿ ಉಪಗ್ರಹ ಹಾಗೂ ನೌಕೆಗಳನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯುವ ರಾಕೆಟ್‌ಗಳ ಕೆಲಸ ಕೇವಲ ನಿಮಿಷಗಳದ್ದಾಗಿರುತ್ತದೆ. ಆದರೆ ಇಂದು ಪಿ.ಎಸ್.ಎಲ್.ವಿ ರಾಕೆಟ್‌ನ ಕೊನೆಯ ಹಂತ, ಉಡಾವಣೆ ಬಳಿಕ ೧ ಗಂಟೆ ೪ ನಿಮಿಷಗಳ ಕಾಲ ಚಾಲ್ತಿಯಲ್ಲಿತ್ತು. ಈ ಬಳಿಕವಷ್ಟೆ ರಾಕೆಟ್‌ನ ಕೊನೆಯ ಹಂತದ ಭಾಗ ಆದಿತ್ಯ ನೌಕೆಯಿಂದ ಬೇರ್ಪಟ್ಟಿತು. ನೌಕೆಯು ಸೂರ್ಯನೆಡೆಗೆ ಸುಮಾರು ೧೫ ಲಕ್ಷ ಕಿ.ಮೀ ಚಲಿಸುವ ಅಗತ್ಯವಿರುವುದರಿಂದ ಹೆಚ್ಚು ವೇಗ ಪಡೆಯಬೇಕಾದ ಕಾರಣ ಆದಿತ್ಯ ನೌಕೆಯನ್ನು ಅತಿದೊಡ್ಡ ಕಕ್ಷೆಯಲ್ಲಿ ಇರಿಸುವ ಅವಶ್ಯಕತೆ ಇದ್ದುದರಿಂದ ರಾಕೆಟ್ ಇಷ್ಟು ಹೊತ್ತು ಚಾಲ್ತಿಯಲ್ಲಿರುವ ಅಗತ್ಯವಿತ್ತು. ಮಧ್ಯಾಹ್ನ ೧೨:೫೪ಕ್ಕೆ ಸರಿಯಾಗಿ ರಾಕೆಟ್‌ನಿಂದ ಬೇರ್ಪಟ್ಟ ಆದಿತ್ಯನನ್ನು ಕಕ್ಷೆಯಲ್ಲಿರಿಸಲಾಯಿತು.

ವಿಭಿನ್ನ ಯೋಜನೆ - ಸೋಮನಾಥ್

ನೌಕೆ ಕಕ್ಷೆಯಲ್ಲಿರಿಸಲಾದ ಬಳಿಕ ಶ್ರೀಹರಿಕೋಟಾದಲ್ಲಿನ ಇಸ್ರೋದ ಕೇಂದ್ರದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಇಸ್ರೋ ಅಧ್ಯಕ್ಷ ಸೋಮನಾಥ್ ಅವರು, ಇದೊಂದು ವಿಭಿನ್ನ ಯೋಜನೆಯಾಗಿದೆ. ಕಕ್ಷಾ ರೂಪದ ಗರಿಷ್ಠ - ಕನಿಷ್ಟ ದೂರಗಳಲ್ಲಿ ಅಜಗಜಾಂತರ ವ್ಯತ್ಯಾಸವಿದ್ದು, ೧ ಗಂಟೆಗಳ ಕಾಲ ರಾಕೆಟ್ ಚಾಲ್ತಿಯಲ್ಲಿರುವ ಅಗತ್ಯತೆ ಇತ್ತು. ಆದಿತ್ಯ ನೌಕೆಯನ್ನು ಭೂ-ಕಕ್ಷೆಯಲ್ಲಿರಿಸಲು ಯಶಸ್ವಿಯಾಗಿದ್ದೇವೆ ಎಂದರು. ಇದೇ ಸಂದರ್ಭ ಚಂದ್ರಯಾನ-೩ ಯೋಜನೆಯ ಬಗ್ಗೆ ಕೂಡ ಮಾಹಿತಿ ನೀಡಿದ ಅವರು, ಪ್ರಗ್ಯಾನ್ ರೋವರ್, ವಿಕ್ರಂ ಲ್ಯಾಂಡರ್‌ನಿAದ ೧೦೦ ಮೀಟರ್ ದೂರ ಸರಿದಿದೆ ಎಂಬುದಾಗಿಯೂ ಮಾಹಿತಿ ಇತ್ತರು.

ಕೇಂದ್ರ ವಿಜ್ಞಾನ - ತಂತ್ರಜ್ಞಾನ ಹಾಗೂ ಬಾಹ್ಯಾಕಾಶ ಸಚಿವರಾದ ಜಿತೇಂದ್ರ ಸಿಂಗ್ ಅವರು ಮಾತನಾಡಿ, ಇಂದು ಇಸ್ರೋ ಮಾಡಿದ ಸಾಧನೆಯನ್ನು ಇಡೀ ವಿಶ್ವವೇ ಗಮನಿಸುತ್ತಿದೆ. ನಮ್ಮಲ್ಲಿನ ಸಾಮರ್ಥ್ಯ ಎಲ್ಲರಿಗೂ ಅರಿವಾಗಿದೆ. ದಶಕಗಳ ಕಾಲ ಇಸ್ರೋ ಸ್ಥಾಪನೆಯಲ್ಲಿ ಹಗಲು-ರಾತ್ರಿ ದುಡಿದ ವಿಜ್ಞಾನಿಗಳಿಂದ ಇಂದು ಇಸ್ರೋ ಈ ಮಟ್ಟ ತಲುಪಲು ಕಾರಣವಾಗಿದೆ. ಆದಿತ್ಯ ಎಲ್-೧ ನಿರ್ಮಾಣಕ್ಕೆ ದೇಶದಾದ್ಯಂತ ವಿವಿಧ ತಾಂತ್ರಿಕ ಸಂಸ್ಥೆಗಳು, ತಾಂತ್ರಿಕ ವಿದ್ಯಾಸಂಸ್ಥೆಗಳು ಕೈ ಜೋಡಿಸಿದ್ದು, ಅವರುಗಳ ಸೇವೆಯೂ ಶ್ಲಾಘನೀಯ ಎಂದರು.

ಆದಿತ್ಯ ಎಲ್-೧ ಯೋಜನಾ ನಿರ್ದೇಶಕಿ ನಿಗರ್ ಶಾಜಿ ಹಾಗೂ ಪಿ.ಎಸ್.ಎಲ್.ವಿ ಯೋಜನಾ ನಿರ್ದೇಶಕ ಬಿಜು ಅವರು ಮಾತನಾಡಿದರು.