ಪೊನ್ನಂಪೇಟೆ, ಸೆ. ೨: ಇತ್ತೀಚೆಗೆ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಕೊಡಗು ಶಾಖೆ, ರಕ್ತ ನಿಧಿ ಕೇಂದ್ರ ಜಿಲ್ಲಾ ಆಸ್ಪತ್ರೆ ಮಡಿಕೇರಿ, ಸಮುದಾಯ ಆರೋಗ್ಯ ಕೇಂದ್ರ ಕುಟ್ಟ, ಜನ ಸ್ನೇಹಿ ಆಟೋ ಚಾಲಕರ ಮತ್ತು ಮಾಲೀಕರ ಸಂಘ ಹಾಗೂ ಕುಟ್ಟ ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯ ದಲ್ಲಿ ಕುಟ್ಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸ ಲಾಗಿತ್ತು. ಕಾರ್ಯಕ್ರಮವನ್ನು ಕುಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅನಿಲ್ ಕುಮಾರ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಅಪಘಾತ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಹೆಚ್ಚಿದ್ದು, ಅಗತ್ಯವಿರುವ ರಕ್ತವನ್ನು ರಕ್ತ ನಿಧಿ ಕೇಂದ್ರದಲ್ಲಿ ಸಂಗ್ರಹ ಮಾಡಿಡಲು ಇಂತಹ ಶಿಬಿರಗಳು ಸಹಕಾರಿಯಾಗಿದೆ ಎಂದರು.

ಮಡಿಕೇರಿ ರಕ್ತ ನಿಧಿ ಕೇಂದ್ರದ ಅಧಿಕಾರಿ ಡಾ. ಕೆ.ಪಿ. ಕರುಂಬಯ್ಯ ಮಾತನಾಡಿ, ರಕ್ತಕ್ಕೆ ಪರ್ಯಾಯವಾಗಿ ಯಾವುದೇ ವಸ್ತು ಇಲ್ಲ. ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ೧೮ ವರ್ಷದಿಂದ ೬೯ ವರ್ಷದ ಒಳಗಿರುವ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡುವ ಮೂಲಕ ರೋಗಗ್ರಸ್ಥರು ಮತ್ತು ಗಾಯಗೊಂಡವರನ್ನು ಬದುಕಿಸಲು ಸಾಧ್ಯ ಎಂದರು.

ಶಿಬಿರದಲ್ಲಿ ೫೦ ಮಂದಿ ರಕ್ತದಾನ ಮಾಡುವ ಮೂಲಕ ೪೭ ಯೂನಿಟ್ ರಕ್ತ ಸಂಗ್ರಹಿಸಲಾಯಿತು.

ಈ ಸಂದರ್ಭ ಕುಟ್ಟ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸತೀಶ್, ಕಾನೂರು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಅಯನ್ ಗೌಡ, ಕುಟ್ಟ ಗ್ರಾ.ಪಂ. ಅಧ್ಯಕ್ಷೆ ಹೇಮ, ಉಪಾಧ್ಯಕ್ಷ ತೀರ್ಥ, ಕುಟ್ಟ ಆಟೋ ಚಾಲಕ ಮಾಲೀಕರ ಸಂಘದ ಪದಾಧಿಕಾರಿಗಳು, ಸದಸ್ಯರು, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಿಬ್ಬಂದಿಗಳು ಹಾಗೂ ಇನ್ನಿತರರು ಇದ್ದರು.