ನಾಪೋಕ್ಲು, ಸೆ. ೨: ಸಮೀಪದ ಯವಕಪಾಡಿ ಹಾಗೂ ಮರಂದೋಡ ಗ್ರಾಮ ವ್ಯಾಪ್ತಿಯಲ್ಲಿ ಭತ್ತದ ಬೆಳೆಗೆ ನೀರಿಲ್ಲದೆ ಸಮಸ್ಯೆ ಉಂಟಾಗಿದೆ. ಪೈರುಗಳು ಒಣಗುತ್ತಿದ್ದು, ಕೆರೆಗಳಿಂದ ನೀರು ಹಾಯಿಸಿ ಪೈರುಗಳನ್ನು ಉಳಿಸಿಕೊಳ್ಳುವ ಸ್ಥಿತಿ ಉದ್ಭವಿಸಿದೆ ಎಂದು ಈ ಭಾಗದ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರತಿ ವರ್ಷ ಆಗಸ್ಟ್ ತಿಂಗಳಲ್ಲಿ ಉತ್ತಮ ಮಳೆ ಸುರಿಯುತ್ತಿತ್ತು. ಈ ಬಾರಿ ಒಂದು ಹನಿ ಮಳೆ ಬಿದ್ದಿಲ್ಲ. ಪ್ರತಿದಿನವೂ ಬಿಸಿಲು ಕಾಯುತ್ತಿದ್ದು ಇದ್ದ ಅಲ್ಪ ಸ್ವಲ್ಪ ನೀರಿನ ಪ್ರಮಾಣವು ಇಂಗುತ್ತಿದೆ. ಬೆಳಿಗ್ಗೆ ನೀರಿಲ್ಲದೆ ಸಮಸ್ಯೆ ಅನುಭವಿಸುವಂತಾಗಿದೆ. ಸಂಬAಧಪಟ್ಟ ಇಲಾಖೆಗಳು ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ಒದಗಿಸಿಕೊಡಬೇಕು ಎಂದು ರೈತ ಕಕ್ಕಬ್ಬೆ-ಕುಂಜಿಲ ಗ್ರಾಮ ಪಂಚಾಯಿತಿ ಸದಸ್ಯ ಚೋಯಮಾಡಂಡ ಹರೀಶ್ ಮೊಣ್ಣಪ್ಪ ಒತ್ತಾಯಿಸಿದರು.
ಮರಂದೋಡ ಗ್ರಾಮದ ರೈತರ ಗದ್ದೆಗಳಿಗೆ ಕೃಷಿ ಇಲಾಖೆ ಅಧಿಕಾರಿ ನಾರಾಯಣ ರೆಡ್ಡಿ, ಕಂದಾಯ ಪರಿವೀಕ್ಷಕ ರವಿಕುಮಾರ್, ಗ್ರಾಮಲೆಕ್ಕಿಗ ಜನಾರ್ಧನ ಭೇಟಿ ನೀಡಿ ಸಮೀಕ್ಷೆ ನಡೆಸಿ ಗ್ರಾಮದ ರೈತರಿಂದ ಮಾಹಿತಿ ಸಂಗ್ರಹಿಸಿದರು.