ಮಡಿಕೇರಿ, ಸೆ. ೨: ಕೊಡಗು ಜಿಲ್ಲೆಯ ಹಿಂದುಳಿದ ವರ್ಗಗಳ ಅರ್ಹ ಕಾನೂನು ಪಧವೀದರರಿಗೆ ೨೦೨೩-೨೪ನೇ ಸಾಲಿಗೆ ನ್ಯಾಯಾಂಗ ಆಡಳಿತದಲ್ಲಿ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಕಾನೂನು ತರಬೇತಿ ಪಡೆಯಲು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪ್ರ.ವರ್ಗ-೧ ಮತ್ತು ಪ್ರ.ವರ್ಗ-೨ಎ, ೩ಎ, ೩ಬಿ ಗೆ ಸೇರಿದವರಾಗಿರಬೇಕು. ಕುಟುಂಬದ ವಾರ್ಷಿಕ ಆದಾಯದ ಮಿತಿ ಪ್ರ.ವರ್ಗ-೧ ರ ಅಭ್ಯರ್ಥಿಗಳಿಗೆ ರೂ. ೩.೫೦ ಲಕ್ಷ ಹಾಗೂ ಪ್ರ.ವರ್ಗ-೨ಎ, ೩ಎ, ೩ಬಿಗೆ ಸೇರಿದ ಅಭ್ಯರ್ಥಿಗಳಿಗೆ ರೂ. ೨.೫೦ ಲಕ್ಷ ಒಳಪಟ್ಟಿರಬೇಕು. ಪ್ರ.ವರ್ಗ-೧ ರ ಅಭ್ಯರ್ಥಿಗಳಿಗೆ ಪ್ರಥಮ ಆದ್ಯತೆ ನೀಡಲಾಗುವುದು. ಪ್ರ.ವರ್ಗ-೧ ರ ಅಭ್ಯರ್ಥಿಗಳ ಕೊರತೆ ಇದ್ದಲ್ಲಿ ಸರ್ಕಾರದ ಆದೇಶದನ್ವಯ ನಿಯಮಾನುಸಾರ ಇತರೆ ವರ್ಗದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

ಅರ್ಜಿಯನ್ನು ಸ್ವೀಕರಿಸುವ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಯು ಕಾನೂನು ಪದವಿ ಪಡೆದ ೨ ವರ್ಷದ ಒಳಗಿರಬೇಕು. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಅರ್ಜಿದಾರರ ವಯಸ್ಸು ಪ್ರ.ವರ್ಗ-೧ರ ಅಭ್ಯರ್ಥಿಗಳಿಗೆ ೩೧ ಮತ್ತು ಪ್ರ.ವರ್ಗ-೨ಎ, ೩ಎ, ೩ಬಿಗೆ ಸೇರಿದ ಅಭ್ಯರ್ಥಿಗಳಿಗೆ ೩೦ ವರ್ಷದ ಒಳಗಿರಬೇಕು. ಅಭ್ಯರ್ಥಿಯು ಬಾರ್ ಕೌನ್ಸಿಲ್‌ನಲ್ಲಿ ನೋಂದಾಯಿಸಲ್ಪಟ್ಟಿರಬೇಕು.

ಕಾನೂನು ತರಬೇತಿಯು ೪ ವರ್ಷಗಳ ಅವಧಿಯಾಗಿದ್ದು, ಮಾಸಿಕ ರೂ. ೪ ಸಾವಿರದಂತೆ ಶಿಷ್ಯವೇತನ ನೀಡಲಾಗುವುದು. ಕಾನೂನು ತರಬೇತಿಯನ್ನು ಕೊಡಗು ಜಿಲ್ಲೆಯ ಹಿಂದುಳಿದ ವರ್ಗಗಳ ೧೦ ಅಭ್ಯರ್ಥಿಗಳಿಗೆ ನೀಡಲು ಅವಕಾಶವಿದೆ. ಆಯ್ಕೆಯಾದ ಅಭ್ಯರ್ಥಿಯು ವಕೀಲ ತರಬೇತಿಯನ್ನು ಅರ್ಧಕ್ಕೆ ನಿಲ್ಲಿಸಿದಲ್ಲಿ, ತರಬೇತಿ ವೆಚ್ಚಕ್ಕೆ ಶೇ. ೧೦ ಬಡ್ಡಿಯನ್ನು ಸೇರಿಸಿ ಸರ್ಕಾರಕ್ಕೆ ಪಾವತಿ ಮಾಡುತ್ತೇನೆಂದು ರೂ. ೧೦೦ ರ ಛಾಪಾ ಕಾಗದದಲ್ಲಿ ಬರೆದುಕೊಡಬೇಕು.

ಅರ್ಜಿ ನಮೂನೆಯನ್ನು ಈ ಕಚೇರಿಯಿಂದ ಪಡೆಯಲು ತಾ. ೧೦ ರವರೆಗೆ ಅವಧಿ ವಿಸ್ತರಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ದೇವರಾಜ ಅರಸು ಭವನ, ಮ್ಯಾನ್ಸ್ ಕಾಂಪೌAಡ್ ಹತ್ತಿರ, ಮಡಿಕೇರಿ ಇವರನ್ನು ಹಾಗೂ ದೂ. ೦೮೨೭೨-೨೯೫೬೨೮ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎನ್. ಮಂಜುನಾಥ್ ತಿಳಿಸಿದ್ದಾರೆ.