ಸಿದ್ದಾಪುರ, ಸೆ. ೨: ಮಡಿಕೇರಿ ವಲಯ ಅರಣ್ಯ ವ್ಯಾಪ್ತಿಗೊಳಪಡುವ ಕಟ್ಟೆಮಾಡು ಹೊಸ್ಕೇರಿ ಭಾಗದ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಮರಳಿ ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆಯನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ರೇಡಿಯೋ ಕಾಲರ್ ಅಳವಡಿಸಿದ ಬಸವ ಎಂಬ ಕಾಡಾನೆಯು ಇತರ ಕಾಡಾನೆಗಳ ಹಾಗೂ ಮರಿ ಆನೆಯೊಂದಿಗೆ ನಂಜರಾಯಪಟ್ಟಣದತ್ತ ಅರಣ್ಯ ಪ್ರದೇಶಕ್ಕೆ ತೆರಳಿರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಲಭಿಸಿದೆ. ಕಾಫಿ ತೋಟಗಳಿಂದ ಕಾಡಿಗೆ ಓಡಿಸಿದ ಕಾಡಾನೆಗಳ ಪೈಕಿ ಕೆಲವು ಕಾಡಾನೆಗಳು ಮರಳಿ ಕಾಫಿ ತೋಟದೊಳಗೆ ಹಿಂತಿರುಗಿ ಬಂದಿವೆ. ಕಟ್ಟೆಮಾಡು ಭಾಗದಲ್ಲಿ ಶನಿವಾರದಂದು ಸಂಜೆ ಸಾರ್ವಜನಿಕರನ್ನು ಕಾಡಾನೆ ಬೆನ್ನಟ್ಟಿದೆ ಎಂದು ತಿಳಿದು ಬಂದಿದೆ. ಅರೆÀಕಾಡು ಭಾಗದಲ್ಲಿ ಮಾನವನನ್ನು ಹತ್ಯೆ ಮಾಡಿದ ಸಲಗ ಒಂದನ್ನು ಸೆರೆ ಹಿಡಿಯಲು ಸಚಿವರು ಆದೇಶ ನೀಡಿದ ಮೇರೆಗೆ ಸಲಗದ ಸೆರೆಗಾಗಿ ಹಾಗೂ ಅದರ ಚಲನವಲನ ಕಂಡುಹಿಡಿಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಹೊಸ್ಕೇರಿ ಭಾಗದ ಸುತ್ತಮುತ್ತಲ ಕಾಫಿ ತೋಟದಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.

ಆದರೆ ಸಲಗ ಈವರೆಗೂ ಪತ್ತೆ ಆಗಿಲ್ಲ. ಅರಣ್ಯ ಸಿಬ್ಬಂದಿಗಳು ಹಗಲಿರುಳು ಪ್ರಯತ್ನಪಡುತ್ತಿದರೂ ಕೂಡ ಸಲಗ ಕಾಣಿಸಿಕೊಳ್ಳುತ್ತಿಲ್ಲ. ಇದಲ್ಲದೆ ಬಾಡಗ ಬಾಣಂಗಾಲ ಗ್ರಾಮದಲ್ಲಿ ಮಹಿಳೆ ಒಬ್ಬರನ್ನು ಹತ್ಯೆ ಮಾಡಿದ ಸಲಗವನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೆ ಸಲಗವು ಕಾರ್ಯಾಚರಣೆ ತಂಡವನ್ನು ದಿಕ್ಕು ತಪ್ಪಿಸುತ್ತ ಸುತ್ತಾಡುತ್ತಿದೆ.

ಈಗಾಗಲೇ ಸಲಗದ ಗುರುತು ಪತ್ತೆಹಚ್ಚಲಾಗಿದ್ದು, ಸಲಗ ಸಮೀಪದ ಕಾಫಿ ತೋಟಗಳಲ್ಲಿ ಓಡಾಡುತ್ತಿರುವ ಬಗ್ಗೆ ತಿಳಿದು ಬಂದಿದೆ. ಸದ್ಯದಲ್ಲಿ ಸೆರೆ ಹಿಡಿಯುವ ವಿಶ್ವಾಸವನ್ನು ಅರಣ್ಯ ಇಲಾಖೆ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಕಾಡಾನೆಗಳನ್ನು ಸೆರೆ ಹಿಡಿಯುವ ಹಾಗೂ ಸೆರೆಹಿಡಿದು ಅನುಭವ ಹೊಂದಿರುವ ಅಭಿಮನ್ಯು ಹಾಗೂ ಕೆಲವು ಸಾಕಾನೆಗಳು ಮೈಸೂರು ದಸರ ಉತ್ಸವಕ್ಕೆ ತೆರಳಿರುತ್ತದೆ. ಬದಲಿ ಸಾಕಾನೆಗಳನ್ನು ಕಾರ್ಯಾಚರಣೆಗೆ ಬಳಸಿಕೊಂಡು ಉಪಟಳ ನೀಡುವ ಎರಡು ಸಲಗಗಳನ್ನು ಸೆರೆಹಿಡಿದು ಸ್ಥಳಾಂತರ ಮಾಡಲು ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ. ಈ ಎರಡು ಸಲಗಗಳು ಅಲ್ಲದೆ ವೀರಾಜಪೇಟೆ ವಲಯದ ಅರಣ್ಯ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ದಾಂಧಲೆ ನಡೆಸುತ್ತಿರುವ ೫೦ ಕಾಡಾನೆಗಳನ್ನು ಸೆರೆ ಹಿಡಿಯಲು ಸರಕಾರಕ್ಕೆ ಅರಣ್ಯ ಇಲಾಖೆ ಪ್ರಸ್ತಾವನೆ ಕಳುಹಿಸಿದೆ. ಸರಕಾರದಿಂದ ಆದೇಶ ಬಂದ ಬಳಿಕ ಹಂತ ಹಂತವಾಗಿ ಕಾಡಾನೆಗಳ ಸೆರೆಗೆ ಅರಣ್ಯ ಇಲಾಖೆ ಮುಂದಾಗಿದೆ ಎಂದು ತಿಳಿದು ಬಂದಿದೆ.

-ವರದಿ ವಾಸು