ಮಡಿಕೇರಿ, ಸೆ. ೨ : ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಸೇರಿದಂತೆ ಸಂವಿಧಾನದತ್ತವಾದ ೯ ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳೆಯಲು ಕೊಡಗು ಜಿಲ್ಲೆಯ ವಿವಿಧೆಡೆ ಪಾದಯಾತ್ರೆ ನಡೆಸಲು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನಿರ್ಧರಿಸಿದೆ.

ಕಾನೂನುಬದ್ಧ ಹಕ್ಕೊತ್ತಾಯಗಳ ಪ್ರತಿಪಾದಕ, ಖ್ಯಾತ ಅರ್ಥಶಾಸ್ತçಜ್ಞ ಡಾ.ಸುಬ್ರಮಣಿಯನ್ ಸ್ವಾಮಿ ಅವರ ಜನ್ಮದಿನವಾದ ತಾ. ೧೫ ರಂದು ಕೊಡವರ ಪುಣ್ಯಕ್ಷೇತ್ರ ತಲಕಾವೇರಿಯಲ್ಲಿ (ತಾವುನಾಡ್) ಪಾದಯಾತ್ರೆಗೆ ಚಾಲನೆ ನೀಡಲಾಗುವುದು ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದ್ದಾರೆ.

ತಲಕಾವೇರಿಯಿಂದ ಆರಂಭಗೊಳ್ಳುವ ಪಾದಯಾತ್ರೆ ೫ ಹಂತಗಳಲ್ಲಿ ನಡೆಯಲಿದ್ದು, ಮಾರ್ಗದುದ್ದಕ್ಕೂ ಕೊಡವರನ್ನು ಭೇಟಿ ಮಾಡಲಾಗುವುದು. ಭೂತ, ವರ್ತಮಾನ ಮತ್ತು ಭವಿಷ್ಯದ ಭಂಡಾರವಾಗಿರುವ ಪ್ರತಿ ನಾಡ ಮಂದ್‌ಗಳಲ್ಲಿ ಸಭೆ ನಡೆಸಿ ಕೊಡವ ಜನಜಾಗೃತಿ ಮೂಡಿಸಲಾಗುವುದು. ಪಾದಯಾತ್ರೆಯು ನವೆಂಬರ್ ಎರಡನೇ ವಾರ ಶ್ರೀ ಪಾಡಿ ಇಗ್ಗುತ್ತಪ್ಪ ಕ್ಷೇತ್ರದಲ್ಲಿ ಸಮಾರೋಪಗೊಳ್ಳಲಿದೆ.

ಮೊದಲ ಹಂತ ತಾ. ೧೫ ರಂದು ತಾವುನಾಡ್, ದೇಶ ಮಂದ್, ಬಲ್ಲತ್‌ನಾಡ್, ಬೆಂಗ್‌ನಾಡ್ (ಮಡಿಕೇರಿ ತಾಲೂಕು) ಮೂಲಕ ಹಾದು ಹೋಗುತ್ತದೆ. ತಾ. ೧೬ ರಂದು ಕುಯಂಗೇರಿನಾಡ್, ಕಗ್ಗೋಡ್ ನಾಡ್, ಮಡಿಕೇರಿ ನಾಡ್ (ಮಡಿಕೇರಿ ತಾಲೂಕು), ತಾ. .೧೭ ರಂದು ಪೊರಮಲೆನಾಡ್, ಮುತ್ತ್ನಾಡ್, (ಮಡಿಕೇರಿ ತಾಲೂಕು), ತಾ. ೧೮ ರಂದು ಬದಿಗೇರಿನಾಡ್, (ಮಡಿಕೇರಿ ತಾಲೂಕು) ಸೂರ್ಲಬ್ಬಿನಾಡ್ (ಸೋಮವಾರಪೇಟೆ ತಾಲೂಕು), ತಾ. ೯ ಗಡಿನಾಡ್, (ಸೋಮವಾರಪೇಟೆ ತಾಲೂಕು) ಪಾಲೇರಿನಾಡ್, (ಮಡಿಕೇರಿ ತಾಲೂಕು) ಮತ್ತು ಇದು ಪಾಲೇರಿ ನಾಡ್ ಮಂದ್‌ನಲ್ಲಿ ಕೊನೆಗೊಳ್ಳುತ್ತದೆ.

ಎರಡನೇ ಹಂತದಲ್ಲಿ ತಾ. ೨೭ರಂದು ಮತ್ತೆ ಮೂಡಗೇರಿನಾಡ್, (ಕುಶಾಲನಗರ ತಾಲೂಕು) ಪೊರೆನಾಲ್‌ನಾಡ್, (ಮಡಿಕೇರಿ ತಾಲೂಕು) ನೂರೊಕ್ಕನಾಡ್, ನೆಲ್ಲಿಯಪುದಿಕೇರಿ ನಾಡ್, (ಕುಶಾಲನಗರ ತಾಲೂಕು) ಮೂಲಕ ಹಾದು ಹೋಗುತ್ತದೆ.

ತಾ. ೨೮ ಕಾಣತ್ತ್ ಮೂರ್ನಾಡ್, (ಮಡಿಕೇರಿ ತಾಲೂಕು) ಬೈರನಾಡ್, (ವೀರಾಜಪೇಟೆ ತಾಲೂಕು), ತಾ. ೨೯ ಎಡೆನಾಲ್‌ನಾಡ್, ಉಮ್ಮತನಾಡ್ - (ವೀರಾಜಪೇಟೆ ತಾಲೂಕು), ಮೂರನೇ ಹಂತದಲ್ಲಿ ಅ.೭ ಕಂಗಳತ್ತನಾಡ್, ಅರ್ಕೇರಿನಾಡ್, (ಪೊನ್ನಂಪೇಟೆ ತಾಲೂಕು), ಅ. ೮ ಕಿರ್ನಾಲ್‌ನಾಡ್, ಪತ್ತ್ ಕಟ್‌ನಾಡ್ (ಪೊನ್ನಂಪೇಟೆ ತಾಲೂಕು), ಅ.೯ ತೊಡನಾಡ್, ಕುರ್ಚಿನಾಡ್, (ಪೊನ್ನಂಪೇಟೆ ತಾಲೂಕು), ಅ. ೧೦ ಮರೆನಾಡ್, ಪಾಕೇರಿನಾಡ್, ಐವತ್ನಾಡ್, ಪೂನಾಡ್, (ಪೊನ್ನಂಪೇಟೆ ತಾಲೂಕು), ಅ.೧೧ ತಾಳೆರಿನಾಡ್, ಅಂಜಿಗೇರಿನಾಡ್, (ಪೊನ್ನಂಪೇಟೆ ತಾಲೂಕು), ನಾಲ್ಕನೇ ಹಂತದಲ್ಲಿ ಅ.೨೧ ಬೊಟ್ಟಿಯತ್‌ನಾಡ್, ಕುತ್ತ್ನಾಡ್, ಬೆರಳಿನಾಡ್, (ಪೊನ್ನಂಪೇಟೆ ತಾಲೂಕು), ಅ. ೨೨ ಪೆರವನಾಡ್, ಬೋಟೋಳಿನಾಡ್, (ವೀರಾಜಪೇಟೆ ತಾಲೂಕು), ಐದನೇ ಹಂತದ ಯಾತ್ರೆ ನ. ೭ ಬೆಪ್ಪ್ನಾಡ್, ಕಡಿಯತ್‌ನಾಡ್, (ವೀರಾಜಪೇಟೆ ತಾಲೂಕು), ನ. ೮ ನೂರಂಬಡನಾಡ್, ನೆಲಜಿನಾಡ್, (ಮಡಿಕೇರಿ ತಾಲೂಕು), ನ. ೯ ಪಾಡಿನಾಡ್- ಪಾಡಿ ಇಗ್ಗುತ್ತಪ್ಪ ಪುಣ್ಯಕ್ಷೇತ್ರ ತಲುಪಿ ಯಾತ್ರೆಯು ಕೆಂಜರಾಣೆ ನಾಡ್ ಮಂದ್‌ನಲ್ಲಿ (ಮಡಿಕೇರಿ ತಾಲೂಕು) ಸಮಾರೋಪಗೊಳ್ಳಲಿದೆ. ಇಡೀ ಕಾರ್ಯಕ್ರಮವು ಶಾಂತಿಯುತ ಮತ್ತು ಸೌಹಾರ್ದಯುತವಾಗಿರುತ್ತದೆ ಎಂದು ನಾಚಪ್ಪ ಮಾಹಿತಿ ನೀಡಿದ್ದಾರೆ.

ಸಿಎನ್‌ಸಿ ಮೂಲಕ ಜನರ ಆಕಾಂಕ್ಷೆಗಳನ್ನು ಪ್ರತಿಧ್ವನಿಸಲು, ಮೂಲೆ ಮೂಲೆಗಳಲ್ಲಿ ಯುಎನ್-ವಿಶ್ವ ರಾಷ್ಟç ಸಂಸ್ಥೆ ಚಾರ್ಟರ್‌ನಲ್ಲಿ ಪ್ರತಿಪಾದಿಸಿರುವ ಸಾರ್ವತ್ರಿಕ ಕಾನೂನಿನ ಪ್ರಕಾರ ಮತ್ತು ಭಾರತದ ಸಂವಿಧಾನದ ಅಡಿಯಲ್ಲಿ ಸ್ವಯಂ ಆಡಳಿತ ಹಾಗೂ ಸ್ವಯಂ ನಿರ್ಣಯದ ಹಕ್ಕುಗಳನ್ನು ಸ್ಥಾಪಿಸಲು ಆರ್ಟಿಕಲ್ ೩೨ ಅನ್ನು ಕಸರತ್ತು ಮಾಡುವ ಮೂಲಕ ಪ್ರಚಾರ ಮಾಡುತ್ತಿದ್ದೇವೆ. ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಯತ್ತತೆಯೂ ಕರ್ನಾಟಕದ ಸ್ವಾಧೀನದ ಅಡಿಯಲ್ಲಿ ಭಾರತದ ಸಾರ್ವಭೌಮತ್ವಕ್ಕೆ ಪೂರಕವಾಗಿರುತ್ತದೆ ಎಂದು ನಾಚಪ್ಪ ಸ್ಪಷ್ಟಪಡಿಸಿದ್ದಾರೆ.