ಸುಂಟಿಕೊಪ್ಪ, ಸೆ. ೧ : ಸುಂಟಿಕೊಪ್ಪ ಪಟ್ಟಣ ವ್ಯಾಪ್ತಿಯಲ್ಲಿ ತೋಡು ಒತ್ತುವರಿಯಿಂದ ಬೃಹತ್ ಪ್ರಮಾಣ ಮನೆ ನಿರ್ಮಿಸಲಾಗಿದ್ದು, ಮತ್ತೊಂದೆಡೆ ಕೆಲವರು ಮನೆ, ಅಂಗಡಿಯ ಶೌಚಾಲಯಕ್ಕೆ ಸೆಪ್ಟಿಂಗ್ ಟ್ಯಾಂಕ್ ನಿರ್ಮಿಸದೆ ನೇರವಾಗಿ ತೋಡಿಗೆ ಶೌಚಾಲಯದಿಂದ ಪೈಪ್‌ಲೈನ್ ಅಳವಡಿಸಿ ಕಲುಷಿತ ಮಲ ತ್ಯಾಜ್ಯವನ್ನು ತೋಡಿಗೆ ಬರುತ್ತಿರುವುದರಿಂದ ವಾತಾವರಣ ಕಲುಷಿತಗೊಳ್ಳುತ್ತಿರುವ ಬೆಳವಣಿಗೆ ಕಂಡು ಬಂದಿದೆ.
ಅವೈಜ್ಞಾನಿಕವಾಗಿ ಕೆಲ ಪ್ರಭಾವಿಗಳು ಮನೆ ನಿರ್ಮಿಸಿದ್ದು, ಪಟ್ಟಣದ ತೋಡನ್ನು ಒತ್ತುವರಿ ಮಾಡಲಾಗಿದೆ. ಕಂದಾಯ ಅಧಿಕಾರಿಗಳು, ಗ್ರಾಮ ಪಂಚಾಯಿತಿಯವರು ಕಂಡೂ ಕಾಣದಂತೆ ಇದ್ದಾರೆ. ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯು ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಜನಸಂಖ್ಯೆಯು ದ್ವಿಗುಣಗೊಳ್ಳುತ್ತಿದೆ. ೧ನೇ ವಾರ್ಡ್, ೨ನೇ ವಾರ್ಡ್, ೩ನೇ ವಾರ್ಡ್ ಹಾಗೂ ಉಲುಗುಲಿ, ನಾರ್ಗಾಣೆ, ಗ್ರಾಮದ ಕೆಲವು ವಾರ್ಡ್ಗಳಲ್ಲಿ ಬೃಹತ್ ಗಾತ್ರದ ವಾಸದ ಮನೆ ನಿರ್ಮಿಸಿದ ಕೆಲವರು ಮನೆ ಶೌಚಾಲಯಕ್ಕೆ ಬೇಕಾದ ಸೆಪ್ಟಿಕ್ ಟ್ಯಾಂಕ್ (ತ್ಯಾಜ್ಯಗುಂಡಿ) ನಿರ್ಮಿಸದೆ ನೇರವಾಗಿ ಮನೆ, ಅಂಗಡಿ, ಶೌಚಾಲಯ ತ್ಯಾಜ್ಯಗಳಿಗೆ ಪೈಪ್ ಅಳವಡಿಸಿ ತೋಡಿಗೆ ಬಿಟ್ಟಿದ್ದಾರೆ.
ಈ ಮಲ ಮೂತ್ರಗಳು ತೋಡಿಗಾಗಿ ಹರಿದು ಗದ್ದೆಹಳ್ಳದ ಪಟ್ಟೆಮನೆ ರೈತ ಕುಟುಂಬದ ಗದ್ದೆಗೆ ಸೇರುತ್ತಿರುವುದರಿಂದ ಗತ್ಯಂತರವಿಲ್ಲದೆ ಅನ್ನದಾತರಾದ ಭತ್ತದ ಗದ್ದೆಯನ್ನು ರೂಢಿಸಿಕೊಳ್ಳುವುದನ್ನು ಕೈಬಿಟ್ಟಿದ್ದಾರೆ. ತೋಡಿನಿಂದ ಮಲ ಮೂತ್ರಗಳು ಗದ್ದೆಗೆ ಹರಿದು ಬರುತ್ತಿರುವುದರ ಬಗ್ಗೆ ಹಲವಾರು ಬಾರಿ ದೂರು ಸಲ್ಲಿಸಿದರೂ ಕ್ರಮ ಮಾತ್ರ ಶೂನ್ಯವಾಗಿದೆ ಎಂದು ರೈತರಾದ ಪ್ರಸನ್ನಕುಮಾರ್ ಅಳಲು ತೋಡಿಕೊಂಡಿದ್ದಾರೆ.
ಗದ್ದೆಹಳ್ಳದ ತೋಡಿನಿಂದ ಕಲುಷಿತ ತ್ಯಾಜ್ಯ ನೇರವಾಗಿ ಚಿಕ್ಲಿಹೊಳೆ ಕಾಲುವೆಗೆ ಸೇರಿ ಅಲ್ಲಿಂದ ಹಾರಂಗಿ ಜಲಾಶಯಕ್ಕೆ ಸೇರುತ್ತಿರುವುದರ ಬಗ್ಗೆ ಜಿಲ್ಲಾಡಳಿತ ಎಚ್ಚರ ವಹಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು; ಇದರಿಂದ ಕೃಷಿಕರು ಭತ್ತ ಬೆಳೆಯಲು ಸಾಧ್ಯವಾಗದೆ ತಮ್ಮ ಜಮೀನನ್ನು ಪಾಳು ಬಿಡಲು ಕಾರಣವಾದರೆ ಮತ್ತೊಂದೆಡೆ ತೋಡಿನಿಂದ ಬರುವ ಕಲುಷಿತ ತ್ಯಾಜ್ಯಗಳು ಗದ್ದೆಹಳ್ಳ ಆಸುಪಾಸಿನ ನಿವಾಸಿಗಳ ಬದುಕಿಗೆ ಮಾರಕ ಪರಿಣಾಮ ಬೀರಿದೆ.
ಸುಂಟಿಕೊಪ್ಪದಲ್ಲಿ ಇತ್ತೀಚೆಗೆ ಡೆಂಗ್ಯೂ ಜ್ವರದಿಂದ ನೂರಾರು ಮಂದಿ ಬಳಲಿ ಬೆಂಡಾಗಿದ್ದು, ಈ ತೋಡಿನ ಅಶುಚಿತ್ವದಿಂದಲೇ
(ಮೊದಲ ಪುಟದಿಂದ) ಇರಬಹುದೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಗಳು ಗಮನಿಸಿದ್ದಾರೆ.
ತೋಡಿಗೆ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಯ ಕೆಲವು ಅನುದಾನಗಳನ್ನು ಬಳಸಿ ಒಳಚರಂಡಿಯನ್ನು ನಿರ್ಮಿಸಲಾಗಿದೆ. ಆದರೆ ಕಾಮಗಾರಿಯು ಅವೈಜ್ಞಾನಿಕತೆ ಯಿಂದ ಕೂಡಿರುವ ಬಗ್ಗೆ ಗ್ರಾಮಸ್ಥರು ಗ್ರಾಮಸಭೆಯಲ್ಲಿ ವಿಷಯ ಪ್ರಸ್ತಾಪಿಸಿರುವುದು ಗಮನಾರ್ಹ ವಾಗಿದೆ.
ಜಿಲ್ಲಾಡಳಿತ ಸುಂಟಿಕೊಪ್ಪದ ನಾಗರಿಕರಿಗೆ ಮಾರಕವಾಗಿರುವ ತೋಡಿನ ಕಲುಷಿತ ತ್ಯಾಜ್ಯದ ದುರ್ವಾಸನೆಯಿಂದ ಮುಕ್ತವಾಗಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಕೃಷಿಕ ಪಟ್ಟೆಮನೆ ಪ್ರಸನ್ನ ಕುಮಾರ್ ವರ್ಷದಲ್ಲಿ ೩ ರಿಂದ ೪ ಬಾರಿ ಚರಂಡಿಯನ್ನು ಸ್ವಚ್ಛಗೊಳಿಸಲಾಗುತ್ತಿದೆ. ಇದರಿಂದ ನಮಗೆ ವೈಯಕ್ತಿಕ ಅಂದಾಜು ಲಕ್ಷಾಂತರ ರೂ. ವೆಚ್ಚವಾಗುತ್ತಿದೆ. ಪಂಚಾಯಿತಿಗೆ ದೂರು ನೀಡಿದರೂ ನಿರ್ಲಕ್ಷö್ಯತೆಯಿಂದ ಇಂದಿನವರೆಗೂ ಈ ಸಮಸ್ಯೆಗೆ ಸೂಕ್ತ ಪರಿಹಾರ ಕೈಗೊಂಡಿಲ್ಲವೆAದು ಪ್ರಸನ್ನ ಅವರು ಅಳಲನ್ನು ತೋಡಿಕೊಂಡಿದ್ದಾರೆ.
೧ನೇ ವಾರ್ಡಿನ ಕೆಲ ವಾಣಿಜ್ಯ ಕಟ್ಟಡದವರೂ ಸಹ ತೋಡಿಗೆ ಶೌಚಾಲಯದ ಕಲುಷಿತ ತ್ಯಾಜ್ಯಗಳಿಗೆ ಪೈಪ್ ಅಳವಡಿಸಿದ್ದಾರೆ. ಈ ಬಗ್ಗೆ ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡು ಗ್ರಾಮ ಪಂಚಾಯಿತಿ, ಜಿಲ್ಲಾಡಳಿತ ಸ್ಥಳ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಈ ಭಾಗದ ಕೃಷಿಕರು ಆಗ್ರಹಿಸಿದ್ದಾರೆ.