ವೀರಾಜಪೇಟೆ, ಸೆ. ೨: ಸಂತ ಶ್ರೀ ನಾರಾಯಣ ಗುರು ಜಯಂತಿ ಯನ್ನು ವೀರಾಜಪೇಟೆ ಎಸ್.ಎನ್. ಡಿ.ಪಿ. ಶಾಖೆಯ ವತಿಯಿಂದ ಆಚರಿಸಲಾಯಿತು.

ಶ್ರೀ ನಾರಾಯಣ ಗುರು ಧರ್ಮ ಪರಿಪಾಲನ ಯೋಗಂ ಎಸ್.ಎನ್. ಡಿ.ಪಿ ವೀರಾಜಪೇಟೆ ಶಾಖೆಯ ವತಿಯಿಂದ ಶಾಖೆಯ ಕಚೇರಿಯಲ್ಲಿ ೧೬೯ನೇ ಶ್ರೀ ನಾರಾಯಣ ಗುರು ಜಯಂತಿ ಆಚರಣೆ ಮಾಡಲಾಯಿತು.

ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ನಾರಾಯಣ ಗುರು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗುರುವಿನ ಸಂದೇಶವನ್ನು ತಿಳಿಸಲಾಯಿತು. ಎಸ್.ಎನ್.ಡಿ.ಪಿ. ವೀರಾಜಪೇಟೆ ಶಾಖೆಯ ಉಪಾಧ್ಯಕ್ಷ ಟಿ.ಆರ್. ಗಣೇಶ್ ಮಾತನಾಡಿ, ನಾರಾಯಣಗುರು ಕೆಳವರ್ಗಗಳ ಮೇಲೆ ನಡೆಯುತ್ತಿದ್ದ ದೌರ್ಜನ್ಯ ವಿರುದ್ಧ ಹೋರಾಡಿ ಸಮಾಜದ ಉದ್ಧಾರಕ್ಕೆ ಪಣತೊಟ್ಟು ರಾಜ್ಯದ ಉದ್ದಗಲಕ್ಕೂ ಸಂಚಾರ ಮಾಡಿ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿದರು. ರಾಜ್ಯದ ವಿವಿಧ ಭಾಗಗಳಲ್ಲಿ ೬೦ಕ್ಕೂ ಹೆಚ್ಚು ಮಂದಿರಗಳನ್ನು ಕಟ್ಟಿ ಶೋಷಿತ ಸಮುದಾಯಕ್ಕೆ ಮಂದಿರದಲ್ಲಿ ಪೂಜೆ ಮಾಡಲು ಅವಕಾಶ ಮಾಡಿಕೊಟ್ಟರು. ಅವರನ್ನು ಇಂದಿಗೂ ದೇವಸಮಾನ ಸಂತ ಎಂದು ಪೂಜಿಸಲಾಗುತ್ತಿದೆ. ನಾರಾಯಣ ಗುರು ಅವರ ಜೀವನ ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಕೊಳ್ಳುವಂತೆ ಕರೆ ನೀಡಿದರು. ವೀರಾಜಪೇಟೆ ಎಸ್.ಎನ್.ಡಿ.ಪಿ. ಶಾಖೆಯ ಅಧ್ಯಕ್ಷ ಟಿ. ನಾರಾಯಣ ಮಾತನಾಡಿ, ತಾ. ೫ ರಂದು ನಗರದ ಮುತ್ತಪ್ಪ ಮಂದಿರದ ಸಭಾಂಗಣದಲ್ಲಿ ಗುರು ಪೂಜೆ ಕಾರ್ಯಕ್ರಮ ನಡೆಯಲಿದೆ. ಅಂದು ಯೂನಿಯನ್ ಅಧ್ಯಕ್ಷ ವಿ.ಕೆ. ಲೋಕೇಶ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಲಿದೆ. ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಮತ್ತು ಪದವಿ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತದೆ. ಕಾರ್ಯಕ್ರಮಕ್ಕೆ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಮಾಡಿದ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭ ಕಾರ್ಯದರ್ಶಿ ಪದ್ಮನಾಭ, ಯೂನಿಯನ್ ಸದಸ್ಯರಾದ ಭಾಸ್ಕರ್, ಪಂಚಾಯಿತಿ ಸದಸ್ಯರಾದ ಪ್ರಭಾ, ಸದಸ್ಯರಾದ ಜನಾರ್ಧನ ಮತ್ತು ಕೆ.ಎ. ಸುರೇಶ್ ಹಾಜರಿದ್ದರು.