ಆಗಸದತ್ತ ಮೊಗ ಮಾಡಿರುವ ರೈತರು

ಶನಿವಾರಸಂತೆ, ಸೆ. ೧: ಆಗಸ್ಟ್ ತಿಂಗಳಲ್ಲಿ ಧಾರಕಾರ ಸುರಿಯಬೇಕಾಗಿದ್ದ ಮುಂಗಾರು ಮಳೆ ಸುರಿಯದೆ ಬೇಸಿಗೆಯಂತೆ ಸುಡುಬಿಸಿಲಿನ ವಾತಾವರಣದಿಂದ ರೈತರು ಆಗಸದತ್ತ ಮೊಗ ಮಾಡಿ ‘ಕಣ್ ಕಣ್’ ಬಿಡುವಂತಾಗಿದೆ. ಮಳೆಯ ನಿರೀಕ್ಷೆ ಹುಸಿಯಾಗಿದ್ದು ಭತ್ತ ಬೆಳೆಯುವ ರೈತರಿಗೆ ದಿಕ್ಕು ತೋಚದಂತಾಗಿದೆ. ಒಂದು ವಾರದೊಳಗೆ ಮಳೆಯಾಗದಿದ್ದರೆ ನಾಟಿ ಮಾಡಿದ ಪೈರು ಬಿಸಿಲಿನ ತಾಪಕ್ಕೆ ಒಣಗಿ ಬೆಳೆ ನಾಶವಾಗುವ ಭೀತಿ ಕಾಡುತ್ತಿದೆ.

ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶೇ. ೯೦ ಗದ್ದೆಗಳಲ್ಲಿ ನಾಟಿ ಕೆಲಸ ಮುಗಿದಿದೆ. ದೊಡ್ಡಬಿಳಾಹ ಗ್ರಾಮದಲ್ಲಿ ಬಹುತೇಕ ಗದ್ದೆಗಳಲ್ಲಿ ನಾಟಿ ಕೆಲಸ ಸುಗಮವಾಗಿ ಸಾಗಿದ್ದು ಉತ್ತಮ ಇಳುವರಿಯ ಕನಸು ಕಾಣುತ್ತಿದ್ದ ರೈತರಿಗೆ ಬಿರು ಬಿಸಿಲಿಗೆ ಗದ್ದೆಯ ಭೂಮಿ ಒಡೆದು ಬಿರುಕು ಬಿಟ್ಟಿದ್ದು ಅಣಕಿಸುವಂತೆ ಕಾಣುತ್ತಿದೆ.

“ಈ ವ್ಯಾಪ್ತಿಯ ಶೇ. ೮೦ ರಷ್ಟು ರೈತರು ಮಳೆಯ ನೀರನ್ನೇ ಅವಲಂಬಿಸಿದ್ದು ವಾರದೊಳಗೆ ಮಳೆಯಾಗದಿದ್ದರೆ ಭತ್ತದ ಬೆಳೆ ಸಂಪೂರ್ಣ ನಾಶವಾದಂತೆಯೆ. ಕೆರೆ, ಕಾಲುವೆಗಳು ಬತ್ತಿ ಹೋಗಿವೆ. ಕೊಳವೆ ಬಾವಿ ಅನುಕೂಲ ಇದ್ದವರು ಆ ನೀರನ್ನೇ ಹಾಯಿಸಿದರೂ ಸದಾ ಬಳಸುವಂತಿಲ್ಲ. ಭತ್ತ ಮಾತ್ರವಲ್ಲ ಕಾಫಿ, ಅಡಿಕೆ, ಕಾಳುಮೆಣಸು ಬೆಳೆಯೂ ನಾಶವಾಗುತ್ತವೆ. ರೈತರ ಜೀವನ ಮೂರಾಬಟ್ಟೆಯಾಗುವ ಸಾಧ್ಯತೆ ಇದೆ ಎಂದು ದೊಡ್ಡ ಬಿಳಾಹ ಗ್ರಾಮದ ರೈತರಾದ ಬಿ.ಎಸ್. ಮೋಹನ್, ಲೋಕೇಶ್, ಕೆಂಚಮ್ಮ ಅಳಲು ತೋಡಿಕೊಂಡಿದ್ದಾರೆ.

ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಇದೇ ಪರಿಸ್ಥಿತಿ ಕಂಡುಬರುತ್ತಿದೆ. ಬರದ ಛಾಯೆ ಆವರಿಸುತ್ತಿದೆ. ನೀರಿನ ಅನುಕೂಲ ಇರುವ ಶೇ. ೬೦ ರಷ್ಟು ರೈತರು ಮಾತ್ರ ಗದ್ದೆಗಳಲ್ಲಿ ನಾಟಿ ಕೆಲಸ ಮಾಡಿದ್ದಾರೆ. ಉಳಿದವರು ಮಳೆ ನೀರಿಗಾಗಿ ಕಾಯುತ್ತಿದ್ದಾರೆ. ಸಸಿಮಡಿ ಬೆಳೆದು ೨೮-೩೦ ದಿನಗಳ ಅವಧಿ ಮೀರಿದೆ. ಬಲಿತ ಸಸಿಮಡಿಗಳನ್ನು ನಾಟಿ ಮಾಡಿದರೂ ಇಳುವರಿ ಕಡಿಮೆಯಾಗುತ್ತದೆ. ಆಗಿರುವ ಮಳೆಗೆ ಕೆರೆ, ಹೊಳೆ ತುಂಬಿಲ್ಲ. ಬಿಸಿಲ ಬೇಗೆಗೆ ಇರುವ ನೀರೂ ಬತ್ತಿ ಹೋಗುತ್ತಿದೆ. ನಾಟಿ ಮಾಡಿದರೂ ಮಳೆ ಬೇಕೇ ಬೇಕು.

“ಕೃಷಿಗೆ ನೀರು ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯ. ಮೂರು ಫೇಸ್ ವಿದ್ಯುತ್ ಕೊಡದೇ ಮೋಟಾರು ಓಡುವುದಿಲ್ಲ. ಮೋಟಾರು ಹಾಳಾದರೆ ರೈತ ೩೦-೪೦ ಸಾವಿರ ರೂಪಾಯಿ ಖರ್ಚು ಮಾಡಬೇಕು. ‘ಬರ್ನ್’ ಆದರೆ ಹೊಸದ್ದು ತೆಗೆದುಕೊಳ್ಳಬೇಕು. ಗದ್ದೆಗಳಲ್ಲಿ ೯೦ ದಿನಗಳ ಬೆಳೆಯಾದ ವಿಎನ್‌ಆರ್, ಇಂಟಾನ್, ತುಂಗಾ, ಅಮೋಘ, ಸೌಭಾಗ್ಯಲಕ್ಷಿö್ಮÃ, ಚಿಪ್ಪುಗ ಭತ್ತದ ಸಸಿಮಡಿಗಳಿಗೆ ಅವಧಿ ಮುಗಿದಿದೆ. ಹೊಸದಾಗಿ ಸಸಿಮಡಿ ಬೆಳೆಯಲು ಸಾಧ್ಯವಿಲ್ಲ. ಕೃಷಿ ಅಧಿಕಾರಿ ಜಮೀನು ಸರ್ವೆ ಮಾಡಿ ಪರಿಹಾರಕ್ಕೆ ಸರ್ಕಾರಕ್ಕೆ ಶಿಪಾರಸ್ಸು ಮಾಡಬೇಕು’’ ಎಂದು ರೈತ ಹಾಗೂ ತಾಲೂಕು ರೈತ ಸಂಘದ ಉಪಾಧ್ಯಕ್ಷ ಜಿ.ಎಂ. ಹೂವಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.