ಕೊಡವರ ಬದುಕಿನ ಕ್ರಮವನ್ನು ವೈಜ್ಞಾನಿಕವಾಗಿ ಅಧ್ಯಯನ ನಡೆಸಿದಾಗ ಸಾಕಷ್ಟು ಭಿನ್ನತೆಯನ್ನು ಕಾಣಬಹುದು. ಇತ್ತೀಚೆಗೆ ವೈದಿಕ ಪರಂಪರೆಯ ಪ್ರಭಾವದಿಂದಾಗಿ ಹೆಚ್ಚಿನ ವಿಶೇಷತೆಗಳು ಕಾಣಿಸದಿರಬಹುದು. ಏಕೆಂದರೆ, ಹಳೆಯ ಪದ್ಧತಿಗಳಲ್ಲಿ ಸಾಕಷ್ಟು ಕಾಲನ ಪ್ರಭಾವಕ್ಕೆ ಸಿಲುಕಿ ಕಳಚಿ ಹೋಗಿವೆ. ಈಗ ಇರುವುದೇ ಹಾಗೂ ವೈದಿಕ ಪರಂಪರೆಯ ಆಚರಣೆಗಳೇ ಕೊಡವರ ಪದ್ಧತಿ ಎನ್ನುವ ತಪ್ಪು ಕಲ್ಪನೆ ಮೂಡಿದೆ. ಆದರೆ. ಹಿಂದಿನ ಕೊಡವರ ಪದ್ಧತಿಗಳನ್ನು ಅಧ್ಯಯನ ನಡೆಸಿದಾಗ, ಅವರಲ್ಲಿಯೇ ಪ್ರತ್ಯೇಕವಾದ ವೈವಾಹಿಕ ಕಾನೂನು ಇದ್ದದ್ದು ತಿಳಿದು ಬರುತ್ತದೆ. ಇಂದಿಗೂ ಕೆಲವೊಂದು ಪದ್ಧತಿ ಅದೇ ರೀತಿ ಮುಂದುವರಿದುಕೊAಡು ಬಂದಿದ್ದು, ಇಂದಿನ ಕಾಲಘಟ್ಟಕ್ಕೆ ಅಗತ್ಯ ಇಲ್ಲದಿರುವುದನ್ನು ಕೈ ಬಿಡಲಾಗಿದೆ. ಐನ್‌ಮನೆಗಳಿಂದ ವಿವಾಹ ಹಾಗೂ ಇನ್ನಿತರ ಸಮಾರಂಭಗಳು ಪಟ್ಟಣ ಪ್ರದೇಶಗಳ ಕಲ್ಯಾಣ ಮಂಟಪ ಗಳಿಗೆ ಸ್ಥಳಾಂತರಗೊAಡ ನಂತರ ಬದಲಾವಣೆ ವೇಗ ಪಡೆದುಕೊಂಡು ಇಂದಿನ ರೂಪಕ್ಕೆ ಬಂದು ನಿಂತಿದೆ.
ಕೆಲವು ಪ್ರದೇಶಗಳಲ್ಲಿನ ಕೆಲವೊಂದು ಜನಾಂಗಗಳ ಆಚರಣೆ ಹಾಗೂ ಪದ್ಧತಿಯನ್ನು ಗಮನಿಸಿದಾಗ ಅಲ್ಲಿ ಪಂಚಾಯಿತಿ ಕಟ್ಟೆಗಳು, ಊರಿನ ಯಜಮಾನರೇ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಿದ್ದದ್ದು ಕಂಡು ಬರುತ್ತದೆ. ಅಲ್ಲೊಂದು ಶಾಶ್ವತವಾದ ನಿಯಮ ಇರುತ್ತಿರಲಿಲ್ಲ. ಮುಖ್ಯಸ್ಥರ ಮಾತೇ ಅಂತಿಮ. ಆದರೆ, ಕೊಡವರಲ್ಲಿ ಯಾವುದೇ ವಿವಾದ ಬರಬಾರದು ಎನ್ನುವ ಕಾರಣಕ್ಕೆ ಕಾನೂನನ್ನು ರೂಢಿ. ನಿಯಮಗಳ ರೂಪದಲ್ಲಿ ಅಳವಡಿಸಿ ಕೊಂಡಿರುವುದು ಅಚ್ಚರಿ ತರುತ್ತದೆ. ಅಲ್ಲಿ ವಿವಾದ ಹಾಗೂ ವ್ಯಾಜ್ಯಕ್ಕೆ ಅವಕಾಶವೇ ಇಲ್ಲ ಎನ್ನುವಂತೆ ಸೂಕ್ಷ÷್ಮ ವಿಷಯಗಳಿಗೂ ವಿವರಣೆ ಇದೆ. ಇದು ಲಿಖಿತವಾಗಿಲ್ಲದಿದ್ದರೂ ಪದ್ಧತಿಯ ರೂಪದಲ್ಲಿ ಇಂದಿಗೂ ಅವುಗಳು ಪಾಲನೆಯಾಗುತ್ತಿರುವುದು ಪ್ರಶಂಸನೀಯ. ಈ ಕಾರಣಕ್ಕಾಗಿ ಕೊಡವರು ಇತ್ತೀಚಿನ ವರ್ಷಗಳ ತನಕವೂ ಪೊಲೀಸ್‌ಠಾಣೆ, ನ್ಯಾಯಾಲಯಗಳ ಮೆಟ್ಟಿಲು ಹತ್ತಿರಲಿಲ್ಲ. ಏಕೆಂದರೆ, ಎಲ್ಲದಕ್ಕೂ ಕಾನೂನಿದ್ದು, ಕುಟುಂಬದಲ್ಲಿ ಪಟ್ಟೆದಾರನ ನೇತೃತ್ವದಲ್ಲಿಯೇ ಎಲ್ಲಾ ವಿವಾದಗಳು ಪರಿಹಾರವಾಗುತ್ತಿದ್ದವು.
ಇದಕ್ಕೆ ಸ್ಪಷ್ಟ ಉದಾಹರಣೆ ಹಿಂದಿನ ವೈವಾಹಿಕ ಕಾನೂನು. ಅಂದಿನ ಕಾಲಘಟ್ಟದಲ್ಲಿ ಕೊಡವರ ಚಿಂತನೆ ಪ್ರಗತಿಪಥವಾಗಿತ್ತು. ಜನಾಂಗಕ್ಕೆ ಒಳಿತಾಗುವಂತಹ ನಿಯಮಗಳನ್ನು ರೂಪಿಸಿಕೊಂಡಿದ್ದರು. ವಿವಾಹದ ಪ್ರತಿಯೊಂದು ಹಂತವನ್ನು ಇದು ಒಳಗೊಂಡಿದೆ. ಸಮ್ಮಂಧ ಕುದುರಿಸುವುದು, ವಿವಾಹವಾಗುವುದು, ವಿಧವಾ ವಿವಾಹ, ಕಚ್ಚೆ ಪಣ ಕೆಟ್ಟುವೊ, ವಿಚ್ಚೇಧನ.. ಹೀಗೆ ಪ್ರತಿಯೊಂದಕ್ಕೂ ಕೊಡವರು ಪದ್ಧತಿ ರೂಪದಲ್ಲಿ ನಿಯಮಗಳನ್ನು ಅಳವಡಿಸಿಕೊಂಡಿರುವುದು ಮಾದರಿಯಾದುದು. ಕೊಡವರಲ್ಲಿ ನಾಗರಿಕತೆಯ ಲಕ್ಷಣಗಳು ಸಾಕಷ್ಟು ಹಿಂದೆಯೇ ಕಾಣಿಸಿಕೊಂಡಿತ್ತು. ಎಲ್ಲವೂ ನಾವು ಅಂದುಕೊAಡAತೆ ಆಗುವುದಿಲ್ಲ. ಅಂದಿನ ಕಾಲಘಟ್ಟದಲ್ಲಿನ ಪ್ರತಿಕೂಲ ಹವಾಮಾನ, ಸಂಪರ್ಕದ ಕೊರತೆ, ಗುಡ್ಡ ಬೆಟ್ಟಗಳಲ್ಲಿ ಒಂಟಿ ಬದುಕು, ಏಕಾಂಗಿತನ ಮುಂತಾದ ಕಾರಣಗಳಿಂದಾಗಿ ಕೆಲವೊಮ್ಮೆ ಮನಸ್ಸಿನ ಹಿಡಿತ ತಪ್ಪುತ್ತಿತ್ತು. ಅಂದರೆ, ವಿವಾಹಕ್ಕೂ ಮುನ್ನ ಸಮ್ಮಂಧಗಳು ಕಂಡು ಬರುತ್ತಿದ್ದದ್ದೂ ಇಲ್ಲವೇ ಇಲ್ಲ ಎಂದು ಹೇಳುವಂತಿಲ್ಲ. ವಿವಾಹವಾಗದೆ ಯುವತಿಯೊಬ್ಬಳು ಗರ್ಭಿಣಿಯಾದರೆ ಕೆಲವೊಂದು ಸಮುದಾಯಗಳಲ್ಲಿ ಕಠಿಣ ಶಿಕ್ಷೆ ವಿಧಿಸುತ್ತಿದ್ದರು. ಆಕೆಗೆ ಹಾಗೂ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕುತ್ತಿದ್ದರು. ಈಗಲೂ ಇದೆ. ಇಲ್ಲವೇ ಛಡಿಏಟು, ದೈಹಿಕ ಶಿಕ್ಷೆ, ಬದುಕು ಪೂರ್ತಿ ಅವಿವಾಹಿತೆ ಯಾಗಿರುವಂತಹ ಶಿಕ್ಷೆಯನ್ನು ನೀಡುತ್ತಿದ್ದರು. ಆದರೆ, ಕೊಡವರು ಇಂತಹ ಸಂದರ್ಭಗಳನ್ನು ಹೇಗೆ ಸೂಕ್ಷ್ಮವಾಗಿ ನಿಭಾಯಿಸಬೇಕು ಎನ್ನುವ ಜಾಣ್ಮೆಯನ್ನು ಹೊಂದಿದ್ದರು. ಇದಕ್ಕಾಗಿ ಅಂದೇ ಕೆಲವೊಂದು ನಿಯಮಗಳನ್ನು ರೂಪಿಸಿಕೊಂಡಿದ್ದರು. ಇದಕ್ಕೆ `ಬೆಂದು ಪರಜೆ’ ಎಂದು ಹೇಳುತ್ತಾರೆ.
ಏನಿದು ಬೆಂದು ಪರಜೆ?: ವಿವಾಹವಾಗುವ ಮುನ್ನ ಅಕ್ರಮ ಸಂಬAಧ ದಿಂದ ಯುವತಿ ಗರ್ಭಿಣಿಯಾದರೆ ಅವರಿಗೇ ವಿವಾಹ ಮಾಡಿಕೊಡುವ ಪದ್ಧತಿ. ಎರಡೂ ಕಡೆ ವಿವಾದ, ಹೊಡೆದಾಟ, ಹೋರಾಟ, ಜೀವ ಹಾನಿಯಂತಹ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದವಿಲ್ಲದೆ ಬಂದ ಸಂಕಷ್ಟವನ್ನು ಸೌಹಾರ್ದಯುತವಾಗಿ ನಿಭಾಯಿಸುವುದೇ ಈ `ಬೆಂದು ಪರಜೆ’ಯ ಉದ್ದೇಶ. ಇಂತಹ ಸಂದರ್ಭ ಬಂದಾಗ ಯುವತಿಯ ಗರ್ಭಕ್ಕೆ ಕಾರಣನಾದ ಯುವಕನ ಕುಟುಂಬದ ಹಿರಿಯರೊಂದಿಗೆ ಹೆಣ್ಣಿನ ಮನೆಯವರು ಮಾತನಾಡುತ್ತಾರೆ. ಕಾರೊಣನ ನೆಲೆ ನೆಲ್ಲಕ್ಕಿ ನಡುಬಾಡೆಯಲ್ಲಿ ಈ ಮಾತುಕತೆ ಆಗುತ್ತಿದ್ದ ಹಿನ್ನೆಲೆಯಲ್ಲಿ ಯಾರೂ ಕೂಡ ಸುಳ್ಳು ಹೇಳುತ್ತಿರಲಿಲ್ಲ. ಹುಡುಗ ತನ್ನ ತಪ್ಪನ್ನು ಒಪ್ಪಿಕೊಂಡು ಆಕೆಯನ್ನು ವಿವಾಹವಾಗುವುದಾಗಿ ಹೇಳುತ್ತಿದ್ದ. ಅಲ್ಲಿಯೇ ಒಪ್ಪಂದವಾಗಿ ನಿಗದಿಪಡಿಸಿದ ದಿನದಂದು ಗಂಡಿನ ಮನೆಯಲ್ಲಿ ಸರಳವಾಗಿ ವಿವಾಹ ಕಾರ್ಯಕ್ರಮ ನಡೆಯುತ್ತದೆ. ಹೆಣ್ಣಿನ ಮನೆಯವರು ಉಸ್ತುವಾರಿ ವಹಿಸಿಕೊಳ್ಳುತ್ತಾರೆ. ಒಂದು ವೇಳೆ ಮಗು ಜನಿಸಿದ್ದಲ್ಲಿ ವಿವಾಹದ ನಂತರ `ಸಮ್ಮಂಧ ಅಡಕುವೊ’ (ಸಂಬAಧ ನೀಡುವುದು) ಕಾರ್ಯಕ್ರಮ ಸಂದರ್ಭ ಮಗುವಿಗೂ ತಾಯಿಯೊಂದಿಗೆ ಆ ಮನೆಯ ಹಕ್ಕನ್ನು ನೀಡಲಾಗುತ್ತದೆ. ಒಂದು ವೇಳೆ ಅಕ್ರಮ ಸಂಬAಧ ಹೊಂದಿದ ಯುವಕ ವಿವಾಹಕ್ಕೂ ಮುನ್ನ ಮಡಿದರೆ, ಅಥವಾ ಇನ್ಯಾವುದೋ ಕಾರಣಕ್ಕೆ ಆಕೆಯನ್ನು ವಿವಾಹವಾಗದೆ ಇದ್ದಲ್ಲಿ ಬೇರೊಬ್ಬನೊಂದಿಗೆ ವಿವಾಹ ಮಾಡಿಕೊಡಬಹುದು. ಈ ಸಂದರ್ಭ ಆಕೆಗೆ ಪುನರ್ ವಿವಾಹ ಆದ ರೀತಿಯಲ್ಲಿಯೇ ಮದುವೆ ಮಾಡುತ್ತಾರೆ. ಅಂದರೆ, ಗಂಡ ಇನ್ನಿಲ್ಲ ಎನ್ನುವ ರೀತಿಯಲ್ಲಿ ಆಕೆಯ ಗರ್ಭಕ್ಕೆ ಕಾರಣನಾಗಿದ್ದವನ ಸಂಬAಧವನ್ನು ತಪ್ಪಿಸಿ ಬೇರೊಬ್ಬನೊಂದಿಗೆ ವಿವಾಹ ಮಾಡಿಕೊಡುತ್ತಾರೆ. ಇದು ಕೂಡ ಮಾದರಿಯಾದ ಒಂದು ಪದ್ಧತಿಯಾಗಿತ್ತು.
ಕುಟ್ಟ ಪರಜೆ: ಕೊಡವರ ವೈವಾಹಿಕ ಕಾನೂನು ಅಥವಾ ಪದ್ಧತಿಯಲ್ಲಿನ ಮತ್ತೊಂದು ಪ್ರಮುಖ ಭಾಗ `ಕುಟ್ಟ ಪರಜೆ’. ಒಂದು ವೇಳೆ ಯುವತಿಯ ಗರ್ಭಕ್ಕೆ ಕಾರಣನಾಗಿ ವಿವಾಹಕ್ಕೆ ಮುನ್ನವೇ ಆತ ಮರಣ ಹೊಂದಿದ್ದಲ್ಲಿ ಆಕೆಯ ಗರ್ಭದಲ್ಲಿರುವ ಅಥವಾ ಆಕೆಗೆ ಜನಿಸಿದ ಮಗುವಿಗೆ ತಂದೆಯ ಕುಟುಂಬದ ಸಂಬAಧ ನೀಡುತ್ತಾರೆ. ಯುವಕ ಸತ್ತ ದಿನವೇ ಕುಟುಂಬದ ಹಿರಿಯರು ಸೇರಿ ಸಮ್ಮಂಧ ಕೊಡುವ ಶಾಸ್ತç ನಡೆಸುತ್ತಾರೆ. ಈ ಸಂದರ್ಭ ಆಕೆ ಸತ್ತವನಿಗೆ ಹೆಂಡತಿಯ ಸ್ಥಾನದಲ್ಲಿ ನಿಂತು ಕರ್ಮಗಳನ್ನು ಮಾಡಬೇಕು. ಒಂದು ವೇಳೆ ವಿವಾಹವಾಗದೆ ಹೆರಿಗೆ ಸಂದರ್ಭ ಇಲ್ಲವೇ ಮಗುವಿಗೆ ಜನ್ಮ ನೀಡಿದ ಕೆಲ ದಿನಗಳಲ್ಲಿ ಆಕೆ ಸಾವಿಗೀಡಾದರೆ ಆ ಮಗುವಿನ ಜನ್ಮಕ್ಕೆ ಕಾರಣನಾದ ಯುವಕ ಮಗುವಿಗೆ ಕುಟುಂಬದ ಹಕ್ಕು ನೀಡಿ ಕರೆದುಕೊಳ್ಳು ತ್ತಾನೆ. ಅಲ್ಲದೆ, ಪತಿಯಂತೆ ಮೃತಳ ಎಲ್ಲಾ ಕರ್ಮಾಂತರವನ್ನು ನಡೆಸುತ್ತಾನೆ.
ಹೀಗೆ ಕೊಡವರಲ್ಲಿ ಕೆಲವೊಂದು ಸಂದರ್ಭಗಳಲ್ಲಿ ಜನಾಂಗದ ಭವಿಷ್ಯಕ್ಕೆ ಅಡ್ಡಿಯಾಗಬಹುದಾಗಿದ್ದ ಸಂದರ್ಭಗಳನ್ನು ಹಿರಿಯರು ಪದ್ಧತಿಯ ಮೂಲಕ ಅತಿ ಸೂಕ್ಷ÷್ಮವಾಗಿ ನಿಭಾಯಿಸಿ ಜನಾಂಗವನ್ನು ರಕ್ಷಿಸಿರುವುದು ಕಂಡು ಬರುತ್ತದೆ. ಒಟ್ಟಿನಲ್ಲಿ ಕೊಡವರ ವೈವಾಹಿಕ ಕಾನೂನು ಅಂದಿನ ಕಾಲಘಟ್ಟದಲ್ಲಿ ಆದರ್ಶವಾಗಿತ್ತು.
(ಮುಂದುವರಿಯುವುದು)
-ಐತಿಚಂಡ ರಮೇಶ್ ಉತ್ತಪ್ಪ, ಮೈಸೂರು
iu.ಡಿಚಿmesh@gmಚಿiಟ.ಛಿom