ಸಂಸದ ಸ್ಥಾನದಿಂದ ಪ್ರಜ್ವಲ್ ರೇವಣ್ಣ ಅನರ್ಹ
ಬೆಂಗಳೂರು, ಸೆ. ೧: ಹಾಸನ ಲೋಕಸಭಾ ಕ್ಷೇತ್ರ ಸಂಸದ ಪ್ರಜ್ವಲ್ ರೇವಣ್ಣ ಅವರ ಆಯ್ಕೆಯನ್ನು ಅಸಿಂಧು ಎಂದು ಕರ್ನಾಟಕ ಹೈಕೋರ್ಟ್ ಶುಕ್ರವಾರ ಘೋಷಿಸಿದೆ. ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪಾರದರ್ಶಕ ರೀತಿಯಲ್ಲಿ ನಾಮಪತ್ರ ಸಲ್ಲಿಸಿಲ್ಲ, ಚುನಾವಣಾ ಅಕ್ರಮ ಎಸಗಿದ್ದಾರೆ, ಹೀಗಾಗಿ ಅವರ ಆಯ್ಕೆ ಅಸಿಂಧು ಎಂದು ಹೇಳಿದೆ. ೨೦೧೯ ರ ಏಪ್ರಿಲ್ ೧೮ ರಂದು ಪ್ರಜ್ವಲ್ ಅವರ ಸಂಸದ ಆಯ್ಕೆಯನ್ನು ಪ್ರಶ್ನಿಸಿ ಬಿಜೆಪಿಯಿಂದ ಸೋತ ಅಭ್ಯರ್ಥಿ ಎ. ಮಂಜು ಮತ್ತು ಕ್ಷೇತ್ರದ ಮತದಾರ ಜಿ. ದೇವರಾಜೇಗೌಡ ಅವರು ಸಲ್ಲಿಸಿದ ಎರಡು ಅರ್ಜಿಗಳ ಸರಣಿ ವಿಚಾರಣೆಯ ನಂತರ ನ್ಯಾಯಮೂರ್ತಿ ಕೆ. ನಟರಾಜನ್ ಅವರು ಇಂದು ಆದೇಶವನ್ನು ಪ್ರಕಟಿಸಿದರು. ನಾಮಪತ್ರ ಸಲ್ಲಿಸುವಾಗ ಭಾರತೀಯ ಚುನಾವಣಾ ಆಯೋಗವು ಸೂಚಿಸಿದ ಮಾದರಿಯಲ್ಲಿ ಆಸ್ತಿ ಮತ್ತು ಹೊಣೆಗಾರಿಕೆಗಳನ್ನು ಬಹಿರಂಗಪಡಿಸದಿರುವ ಆಧಾರದ ಮೇಲೆ ಪ್ರಜ್ವಲ್ ಅವರ ಆಯ್ಕೆಯನ್ನು ಅರ್ಜಿದಾರರು ಪ್ರಶ್ನಿಸಿದ್ದರು. ಇದು ಭ್ರಷ್ಟ ಆಚರಣೆಗೆ ಸಮಾನವಾಗಿದೆ ಎಂದು ಆಕ್ಷೇಪ ಎತ್ತಿದ್ದರು. ಸಂಸತ್ ಸದಸ್ಯ ಸ್ಥಾನದಿಂದ ಅನರ್ಹತೆ ಪ್ರಜ್ವಲ್ ರೇವಣ್ಣ ಅವರ ಭವಿಷ್ಯದ ರಾಜಕೀಯ ವೃತ್ತಿಬದುಕಿಗೆ ಹಿನ್ನಡೆಯಾಗಿದ್ದು ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ವಕೀಲರ ಮೂಲಕ ಸಿದ್ಧತೆ ನಡೆಸುತ್ತಿದ್ದಾರೆ.
ಸೂರ್ಯಾಯಾನಕ್ಕೆ ಕ್ಷಣಗಣನೆ
ಶ್ರೀಹರಿಕೋಟ, ಸೆ. ೧: ಸೂರ್ಯ ಕಿರಣಗಳೇ ಬೀಳದ ಚಂದ್ರನ ಕತ್ತಲೆಯ ದಕ್ಷಿಣ ಧ್ರುವ ಪ್ರದೇಶದಲ್ಲಿ ಲ್ಯಾಂಡರ್ ಅನ್ನು ಯಶಸ್ವಿಯಾಗಿ ಇರಿಸಿದ ನಂತರ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಇದೀಗ ತನ್ನ ಮುಂದಿನ ಬಾಹ್ಯಾಕಾಶ ಸಾಹಸಕ್ಕೆ ಸಿದ್ದವಾಗಿದ್ದು, ಬಹು ನಿರೀಕ್ಷೆಯ ಆದಿತ್ಯ ಎಲ್ ೧ ಉಪಗ್ರಹ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ದೇಶದ ಮೊದಲ ಸೌರ ಮಿಷನ್ ಆದಿತ್ಯ ಎಲ್ ೧ಗಾಗಿ ಸಕಲ ರೀತಿಯಲ್ಲೂ ಸಿದ್ಧವಾಗಿದ್ದು, ಈಗಾಗಲೇ ಉಪಗ್ರಹ ಉಡಾವಣೆಯ ಅಂತಿಮ ಮತ್ತು ಅಧಿಕೃತ ಕ್ಷಣಗಣನೆ ಆರಂಭವಾಗಿದೆ. ಸೂರ್ಯಯಾನ ಉಡಾವಣೆಯು ಶನಿವಾರ ಅಂದರೆ ತಾ. ೨ ರಂದು ಬೆಳಿಗ್ಗೆ ೧೧.೫೦ಕ್ಕೆ ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದ ಲಾಂಚ್ ಪ್ಯಾಡ್‌ನಿಂದ ನಿಗದಿಯಾಗಿದೆ. ಉಡಾವಣಾ ಪೂರ್ವಾಭ್ಯಾಸ ಮತ್ತು ವಾಹನದ ಆಂತರಿಕ ತಪಾಸಣೆ ಎಲ್ಲವೂ ಪೂರ್ಣಗೊಂಡಿದೆ.
ಕೇAದ್ರ ಸಚಿವರ ಮನೆಯಲ್ಲಿ ಶೂಟೌಟ್
ಲಖನೌ, ಸೆ. ೧: ಕೇಂದ್ರ ನಗರಾಭಿವೃದ್ಧಿ ಖಾತೆ ರಾಜ್ಯ ಸಚಿವ ಕೌಶಲ್ ಕಿಶೋರ್ ಅವರಿಗೆ ಸೇರಿದ ಮನೆಯಲ್ಲಿ ವ್ಯಕ್ತಿಯೊಬ್ಬನನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಶುಕ್ರವಾರ ನಸುಕಿನ ಜಾವ ಈ ಘಟನೆ ನಡೆದಿದ್ದು, ಹತ್ಯೆಯಾದವನನ್ನು ವಿನಯ್ ಶ್ರೀವಾಸ್ತವ್ (೩೦) ಎಂದು ಗುರುತಿಸಲಾಗಿದೆ. ಠಾಕೂರ್ ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಕೌಶಲ್ ಕಿಶೋರ್ ಅವರಿಗೆ ಸೇರಿದ ಮನೆಯಲ್ಲಿ ಕೊಲೆಯಾಗಿದೆ ಎಂಬ ಮಾಹಿತಿ ಬಂದಿತ್ತು. ವಿನಯ್ ಶ್ರೀವಾಸ್ತವ್ ಎಂಬವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಬೆಳಗಿನ ಜಾವ ೪ ಗಂಟೆಗೆ ಕೊಲೆಯಾಗಿದೆ ಎಂದು ಲಖನೌ ಜಂಟಿ ಪೊಲೀಸ್ ಆಯುಕ್ತ ಅಕ್ಷಯ್ ಕುಲಹರಿ ತಿಳಿಸಿದ್ದಾರೆ. ಕೊಲೆಯಾದ ಮನೆಯಲ್ಲಿ ಸಚಿವ ಕೌಶಲ್ ಕಿಶೋರ್ ಅವರ ಮಗ ವಿಕಾಸ್ ಕಿಶೋರ್ ವಾಸಿಸುತ್ತಿದ್ದರು. ಕೊಲೆ ಬಗ್ಗೆ ತನಿಖೆ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಕಾವೇರಿ ವಿವಾದ - ವಿಚಾರಣೆ ಮುಂದೂಡಿಕೆ
ನವದೆಹಲಿ, ಸೆ. ೧: ತಮಿಳುನಾಡಿಗೆ ಪ್ರತಿನಿತ್ಯ ೨೪ ಸಾವಿರ ಕ್ಯೂಸೆಕ್ ಕಾವೇರಿ ನೀರು ಬಿಡಲು ಕರ್ನಾಟಕಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ತಮಿಳುನಾಡು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ತಾ. ೬ಕ್ಕೆ ಸುಪ್ರೀಂ ಕೋರ್ಟ್ ಮುಂದೂಡಿದೆ. ಕಳೆದ ಶುಕ್ರವಾರ ಪ್ರಕರಣದ ವಿಚಾರಣೆ ನಡೆಸಿದ್ದ ಬಿ.ಆರ್. ಗವಾಯಿ ನೇತೃತ್ವದ ತ್ರಿಸದಸ್ಯ ಪೀಠ, ಕರ್ನಾಟಕ ಈ ವರ್ಷ ತಮಿಳುನಾಡಿಗೆ ನೀರು ಬಿಡುಗಡೆ ಮಾಡಿರುವ ಪ್ರಮಾಣದ ಬಗ್ಗೆ ವರದಿ ಸಲ್ಲಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಸೂಚಿಸಿತ್ತು. ಬಳಿಕ ವಿಚಾರಣೆಯನ್ನು ಸೆಪ್ಟೆಂಬರ್ ೧ಕ್ಕೆ ಮುಂದೂಡಿತ್ತು. ಸಂವಿಧಾನದ ೩೭೦ನೇ ವಿಧಿಯಡಿ ನೀಡಿದ್ದ ವಿಶೇಷ ಸ್ಥಾನಮಾನ ರದ್ಧತಿ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅಧ್ಯಕ್ಷತೆಯ ಸಾಂವಿಧಾನಿಕ ಪೀಠ ನಡೆಸುತ್ತಿದೆ.
ಗಜಪಯಣಕ್ಕೆ ಚಾಲನೆ
ಮೈಸೂರು, ಸೆ. ೧: ವಿಶ್ವ ವಿಖ್ಯಾತ ಮೈಸೂರು ದಸರಾ ಆರಂಭಕ್ಕೆ ಇನ್ನು ಒಂದೂವರೆ ತಿಂಗಳು ಬಾಕಿ ಇದೆಯಷ್ಟೆ. ದಸರಾದ ಮುಖ್ಯವಾದ ಗಜಪಯಣಕ್ಕೆ ಇಂದು ಶುಕ್ರವಾರ ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿಯ ನಾಗರಹೊಳೆ ಹೆಬ್ಬಾಗಿಲಿನಲ್ಲಿ ಚಾಲನೆ ನೀಡಲಾಗಿದೆ. ಮೈಸೂರು ದಸರಾ-೨೦೨೩ರ ಗಜಪಡೆಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ ಗಜಪಯಣಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು. ಈ ಮೂಲಕ ವಿಶ್ವ ವಿಖ್ಯಾತ ಮೈಸೂರು ದಸರಾ-೨೦೨೩ಕ್ಕೆ ನಾಂದಿ ಹಾಡಲಾಗಿದೆ. ಇಂದು ಅರಣ್ಯ ಖಾತೆ ಸಚಿವ ಈಶ್ವರ ಖಂಡ್ರೆ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಮಹಾದೇವಪ್ಪ ಸೇರಿದಂತೆ ಗಣ್ಯರು, ಅಧಿಕಾರಿಗಳು ನಾಗರಹೊಳೆ ರಾಷ್ಟಿçÃಯ ಉದ್ಯಾನವನ ಹೆಬ್ಬಾಗಿಲು ವೀರನಹೊಸಳ್ಳಿಯ ಬಳಿ ಅಭಿಮನ್ಯು ನೇತೃತ್ವದ ೯ ಗಜಪಡೆಗಳಾದ ಮಹೇಂದ್ರ, ಅರ್ಜುನ, ವರಲಕ್ಷಿö್ಮ, ಧನಂಜಯ, ಗೋಪಿ, ವಿಜಯ, ಪಾರ್ಥಸಾರಥಿ, ರೋಹಿತ ಗಜಪಡೆಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಲಾಯಿತು.