ಮಡಿಕೇರಿ, ಸೆ. ೧ : ವಾಸವಿರುವದು ಕೇರಳದಲ್ಲಾದರೂ ಕೊಡಗು ಜಿಲ್ಲೆಯ ನಿಕಟ ಸಂಪರ್ಕ., ಆಗಾಗ್ಗೆ ಕೊಡಗಿಗೆ ಬರುತ್ತಾ ಇಲ್ಲಿಯೂ ಒಂದು ಮದುವೆ., ಇದರೊಂದಿಗೆ ಕಾಫಿ ತೋಟವೊಂದನ್ನು ಭೋಗ್ಯಕ್ಕೆ ಪಡೆದು ಅದೇ ತೋಟದಲ್ಲಿರುವÀ ಮನೆಯಲ್ಲಿಯೇ ಅಕ್ರಮ ವ್ಯವಹಾರ..!

ಇದು ನಕಲಿ ಮದ್ಯ ತಯಾರಿ ಮಾಡುತ್ತಿದ್ದ ಆರೋಪಿ ಹಾಸಿಂ ಎಂಬಾತನ ಕತೆ. ಭಾಗಮಂಡಲ ವ್ಯಾಪ್ತಿಯ ತಾವೂರು ಗ್ರಾಮದಲ್ಲಿನ ಮನೆಯೊಂದರಲ್ಲಿ ನಕಲಿ ಮದ್ಯ ತಯಾರು ಮಾಡುತ್ತಿರುವ ಬಗ್ಗೆ ದೊರೆತ ಸುಳಿವಿನ ಮೇರೆಗೆ ನಿನ್ನೆ ದಾಳಿ ನಡೆಸಿದ ಪೊಲೀಸರು ಈ ಸಂಬAಧ ಹಾಸಿಂ(೪೭) ಎಂಬಾತನನ್ನು ಬಂದಿಸಿ, ಒಂದು ಕಾರು, ಮನೆಯಲ್ಲಿದ್ದ ಪ್ಲಾಸ್ಟಿಕ್ ಬಾಟಲಿಗಳು, ಮುಚ್ಚಳಗಳು, ಲೇಬಲ್‌ಗಳು ಹಾಗೂ ಕಾಸ್ಟಿಕ್ ಕ್ಯಾರಮೆಲ್ ಎಂಬ ದ್ರವ ರೂಪದ ವಸ್ತು(ಸ್ಪಿರಿಟ್)ಗಳನ್ನು ವಶಪಡಿಸಿಕೊಂಡಿದ್ದರು. ಪ್ರಕರಣದಲ್ಲಿ ಸೆರೆ ಸಿಕ್ಕಿರುವ ಆರೋಪಿ ಹಾಸಿಂ ಮೂಲತಃ ಕೇರಳದ ಕಾಸರಗೋಡುವಿನ ಚೆರ್ಕಳ ನಿವಾಸಿಯಾಗಿದ್ದು ವಿವಾಹವಾಗಿದ್ದು ಎರಡು ಮಕ್ಕಳಿದ್ದಾರೆ.

ಕೊಡಗು ಜಿಲ್ಲೆಯ ಸಂಪರ್ಕವಿದ್ದ ಈತ ತಾವೂರಿನಲ್ಲಿಯೂ ಮತ್ತೊಬ್ಬಾಕೆಯನ್ನು ವಿವಾಹವಾಗಿದ್ದು, ಒಂದು ಪುಟ್ಟ ಮಗು ಸೇರಿದಂತೆ ಮೂವರು ಮಕ್ಕಳಿದ್ದಾರೆ. ಹಾಗೇ ತಾವೂರಿನಲ್ಲಿ ಕಾಫಿ ತೋಟವೊಂದನ್ನು ಭೋಗ್ಯಕ್ಕೆ ಪಡೆದು ತೋಟದ ಮನೆಯಲ್ಲಿ ಅಕ್ರಮ ವ್ಯವಹಾರ ನಡೆಸುತ್ತಿದ್ದನೆಂಬದು ತಿಳಿದು ಬಂದಿದೆ.

(ಮೊದಲ ಪುಟದಿಂದ)

ನಾಪೋಕ್ಲು ನಿವಾಸಿಯ ತೋಟ..!

ಹಾಸಿಂ ಭೋಗ್ಯಕ್ಕೆ ಪಡೆದುಕೊಂಡಿರುವ ತೋಟ ನಾಪೋಕ್ಲು ನಿವಾಸಿ, ಬೆಂಗಳೂರಿನಲ್ಲಿ ವಕೀಲರಾಗಿರುವ ಹನೀಫ್ ಎಂಬವರಿಗೆ ಸೇರಿದ್ದೆಂದು ಪೊಲೀಸ್ ವಿಚಾರಣೆ ವೇಳೆ ತಿಳಿದುಬಂದಿದೆ. ತಾವೂರಿನಲ್ಲಿರುವ ೧೦ಎಕರೆ ಕಾಫಿ ತೋಟ ಈ ಮೊದಲು ಹಾಸಿಂನ ಎರಡನೇ ಪತ್ನಿಯ ಅತ್ತೆಯದ್ದಾಗಿತ್ತು. ಬಳಿಕ ಹನೀಫ್ ಖರೀದಿಸಿದ್ದರು. ಅದೇ ತೋಟವನ್ನು ಐದು ವರ್ಷಗಳ ಅವಧಿಗೆ ಹಾಸಿಂ ಭೋಗ್ಯಕ್ಕೆ ಪಡೆದಿದ್ದು, ಈಗಾಗಲೇ ಮೂರು ವರ್ಷಗಳಾಗಿವೆ.

ಹಾಸಿಂ ಪತ್ನಿ ಹಾಗೂ ಮಕ್ಕಳು ತಾವೂರಿನ ರಸ್ತೆ ಬದಿಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದು, ಈ ರೀತಿಯ ಅಕ್ರಮ ಕಾರ್ಯಕ್ಕೆ ತೋಟದಲ್ಲಿರುವ ಮನೆಯನ್ನು ಬಳಸಿಕೊಳ್ಳಲಾಗಿದೆ. ಬಂದಿತ ಆರೋಪಿ ಹಾಸಿಂನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಭಾಗಮಂಡಲ ಠಾಣಾಧಿಕಾರಿ ಶೋಭಾ ಲಮಾಣಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಇದೊಂದು ದೊಡ್ಡ ಜಾಲವಾಗಿದ್ದು, ಯಾರೆಲ್ಲ ಭಾಗಿಯಾಗಿದ್ದಾರೆ., ಮೂಲ ಕಾರ್ಖಾನೆ ಎಲ್ಲಿದೆ., ಪ್ರಮುಖ ರೂವಾರಿ ಯಾರೆಂಬದು ತನಿಖೆಯಿಂದಷ್ಟೇ ಹೊರಬರಬೇಕಿದೆ..!

-ಕುಡೆಕಲ್ ಸಂತೋಷ್