ಮಡಿಕೇರಿ, ಸೆ. ೨: ಮಾನವ ಕುಲದ ಏಕತೆಗಾಗಿ ಮತ್ತು ಸಮಾಜ ನಿರ್ಮಾಣಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ಮತ್ತು ನುಲಿಯ ಚಂದಯ್ಯ ಅವರು ಶ್ರಮಿಸಿದ್ದಾರೆ ಎಂದು ಕ.ಸಾ.ಪ. ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ತಿಳಿಸಿದರು.

ನಗರದ ಗಾಂಧಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ವತಿಯಿಂದ ನಡೆದ ಬ್ರಹ್ಮಶ್ರೀ ನಾರಾಯಣಗುರು ಮತ್ತು ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನಾರಾಯಣಗುರು ಅವರು ಶೋಷಿತ ಸಮಾಜಕ್ಕೆ ಅರಿವಿನ ಬೆಳಕನ್ನು ನೀಡಿದ್ದಾರೆ. ಒಂದೇ ಧರ್ಮ, ಒಂದೇ ದೇವರು ಎಂದು ಸಾರಿದ್ದಾರೆ. ಎಲ್ಲರೂ ಸಮಾಜಮುಖಿಯಾಗಿ ಬದುಕಬೇಕು ಎಂಬುದು ನಾರಾಯಣ ಗುರು ಮತ್ತು ನುಲಿಯ ಚಂದಯ್ಯ ಅವರ ಆಶಯವಾಗಿತ್ತು ಎಂದು ಟಿ.ಪಿ. ರಮೇಶ್ ಅವರು ನುಡಿದರು.

ಮೂಡನಂಬಿಕೆ, ಅಜ್ಞಾನ ವಿರುದ್ಧ ಹೆಚ್ಚಿನ ಜಾಗೃತಿ ಮೂಡಿಸಿದರು. ತತ್ವ ನಿಷ್ಠೆ, ಸತ್ಯನಿಷ್ಠೆ ಮೂಲಕ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯ ಎಂಬುದನ್ನು ನಾರಾಯಣ ಗುರು ಮತ್ತು ನುಲಿಯ ಚಂದಯ್ಯ ಅವರು ಸಾರಿದ್ದಾರೆ ಎಂದು ಟಿ.ಪಿ. ರಮೇಶ್ ಅವರು ಹೇಳಿದರು.

ಬ್ರಹ್ಮಶ್ರೀ ನಾರಾಯಣ ಗುರು ಅವರು ೧೮೫೪ ರಲ್ಲಿ ತಿರುವನಂತಪುರ ಬಳಿಯ ಚಂಬಾಳತಿ ಎಂಬಲ್ಲಿ ಜನಿಸಿ, ಅಧ್ಯಾತ್ಮದ ಮೂಲಕ ಸಮಾಜ ಸುಧಾರಣೆ ಮಾಡಲು ಪ್ರಯತ್ನಿಸಿದರು ಎಂದು ವಿವರಿಸಿದರು. ನುಲಿಯ ಚಂದಯ್ಯ ಅವರು ಬಿಜಾಪುರ ಜಿಲ್ಲೆಯ ಶಿವಣಗಿಯಲ್ಲಿ ೧೧೬೦ ರಲ್ಲಿ ಜನಿಸಿದರು. ಇವರ ಅಂಕಿತ ನಾಮ ಚಂದೇಶ್ವರಲಿAಗ. ಹಗ್ಗ ಹೊಸೆದು ಮಾರುವುದು ಇವರ ಕಾಯಕ. ಇವರು ೪೮ಕ್ಕೂ ಹೆಚ್ಚು ವಚನಗಳನ್ನು ಬರೆದಿದ್ದಾರೆ. ಕಾಯಕ ನಿಷ್ಠೆ ಮತ್ತು ಜಂಗಮ ದಾಸೋಹ ಗಮನಾರ್ಹ ವಾಗಿದೆ. ನುಲಿಯ ಚಂದಯ್ಯ ಬಸವಣ್ಣನವರ ಸಮಕಾಲೀನರು ಮತ್ತು ಅವರ ಜೊತೆ ಕೈ ಜೋಡಿಸಿದ ಪ್ರಮುಖ ಶರಣರಲ್ಲಿ ಒಬ್ಬರು ಎಂದು ಟಿ.ಪಿ. ರಮೇಶ್ ಅವರು ತಿಳಿಸಿದರು.

ಮಡಿಕೇರಿ ತಾಲೂಕು ಬಿಲ್ಲವ ಸಮಾಜದ ಅಧ್ಯಕ್ಷೆ ಲೀಲಾವತಿ ಮಾತನಾಡಿ, ವಿದ್ಯೆಯಿಂದ ಸ್ವತಂತ್ರ ವಾಗಿ ಬದುಕಲು ಸಾಧ್ಯ ಎಂಬುದನ್ನು ನಾರಾಯಣಗುರು ಅವರು ಸಾರಿದ್ದಾರೆ ಎಂದರು. ಕುಳುವ ಸಮಾಜದ ಜಿಲ್ಲಾಧ್ಯಕ್ಷ ಹೆಚ್.ಪಿ. ಮಹೇಶ್ ಮಾತನಾಡಿ, ನುಲಿಯ ಚಂದಯ್ಯ ಅವರ ಆದರ್ಶಗಳನ್ನು ತಿಳಿದುಕೊಳ್ಳುವಂತಾಗಬೇಕು ಎಂದರು.

ಜಿ.ಪA. ಸಿಇಓ ವರ್ಣಿತ್ ನೇಗಿ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರು ಮತ್ತು ನುಲಿಯ ಚಂದಯ್ಯ ಅವರ ಆದರ್ಶ ಮತ್ತು ಜೀವನದ ಬಗ್ಗೆ ತಿಳಿದುಕೊಳ್ಳುವಂತಾಗಬೇಕು. ನಾರಾಯಣ ಗುರು ಮತ್ತು ನುಲಿಯ ಚಂದಯ್ಯ ಅವರಂತೆ ನಡೆದು ಕೊಳ್ಳಬೇಕು. ಅವರ ಆದರ್ಶಗಳನ್ನು ಪಾಲಿಸುವಂತಾಗಬೇಕು ಎಂದರು.

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಜವರಪ್ಪ ಮಾತನಾಡಿ, ಶರಣರು ಹಾಗೂ ದಾಸರ ಪರಂಪರೆಯನ್ನು ತಿಳಿದುಕೊಂಡು ಮುನ್ನಡೆಯು ವಂತಾಗಬೇಕು ಎಂದು ಹೇಳಿದರು.

ಸರ್ವೋದಯ ಸಮಿತಿ ಜಿಲ್ಲಾ ಅಧ್ಯಕ್ಷ ಅಂಬೆಕಲ್ಲು ಕುಶಾಲಪ್ಪ, ಜಿ.ಪಂ. ಉಪ ಕಾರ್ಯದರ್ಶಿ ಧನರಾಜ್, ತಹಶೀಲ್ದಾರ್ ಪ್ರವೀಣ್ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ನಟರಾಜ, ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಆಯುಕ್ತ ಕೆ.ಟಿ. ಬೇಬಿ ಮ್ಯಾಥ್ಯೂ, ಜಿಲ್ಲಾ ಸಹ ಕಾರ್ಯದರ್ಶಿ ಬೊಳ್ಳಜೀರ ಬಿ. ಅಯ್ಯಪ್ಪ, ಇತರರು ಇದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ಸ್ವಾಗತಿಸಿದರು. ಕಲಾವಿದ ಬಿ.ಸಿ. ಶಂಕರಯ್ಯ ಅವರು ನಾಡಗೀತೆ ಹಾಡಿದರು. ಮಣಜೂರು ಮಂಜುನಾಥ್ ನಿರೂಪಿಸಿ, ವಂದಿಸಿದರು.