ಮಡಿಕೇರಿ, ಸೆ. ೨ : ಜಿಲ್ಲೆಯಲ್ಲಿ ನಕಲಿ ಮದ್ಯ ತಯಾರಿ ಮಾಡುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಪೊಲೀಸರು ಇದೀಗ ಈ ಅಕ್ರಮ ಜಾಲದ ಪ್ರಮುಖ ಆರೊಪಿಗಾಗಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.

ಭಾಗಮಂಡಲ ಸನಿಹದ ತಾವೂರು ಗ್ರಾಮದ ತೋಟದ ಮನೆಯೊಂದರಲ್ಲಿ ನಕಲಿ ಮದ್ಯ ತಯಾರಿ ಮಾಡುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚಿದ ಪೊಲೀಸರು, ಈ ಸಂಬAಧ ಕೇರಳದ ನಿವಾಸಿ ಹಾಸಿಂ ಎಂಬಾತನನ್ನು ಬಂದಿಸಿ ನ್ಯಾಯಾಂಗ ವಶಕ್ಕೊಪ್ಪಿಸಿದ್ದಾರೆ. ಆದರೆ, ಆರೋಪಿಗೆ ಕೆಲವೊಂದು ಅನಾರೋಗ್ಯ ಸಮಸ್ಯೆ ಇರುವ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆ ಸಾಧ್ಯವಾಗದ ಕಾರಣ ಈ ಪ್ರಕರಣದ ಸಂಪೂರ್ಣ ಮಾಹಿತಿ ಕಲೆಹಾಕಲು ಸಾಧ್ಯವಾಗುತ್ತಿಲ್ಲ.

(ಮೊದಲ ಪುಟದಿಂದ) ಆರೋಪಿ ಕೂಡ ಯಾವದೇ ಮಾಹಿತಿಯನ್ನು ಬಹಿರಂಗಪಡಿಸುತ್ತಿಲ್ಲ. ಹಾಗಾಗಿ ಮದ್ಯ ತಯಾರಿಸುತ್ತಿರುವ ಮೂಲ ಸ್ಥಳ., ಅದಕ್ಕೆ ಬಳಸಲಾಗುವ ಯಂತ್ರಗಳ ಪತ್ತೆ ಹಚ್ಚಲು ಇನ್ನೂ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಬೇರೆ ಮಾರ್ಗದ ಮೂಲಕ ಜಾಲವನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ.

ಈಗಾಗಲೇ ಪ್ರಮುಖ ಆರೋಪಿಯ ಬಗ್ಗೆ ಸುಳಿವು ದೊರೆತಿದ್ದು, ಶೀಘ್ರದಲ್ಲೇ ಆತನನ್ನು ವಶಕ್ಕೆ ಪಡೆಯುವ ಬಗ್ಗೆ ಮಾಹಿತಿ ಲಭಿಸಿದೆ. ಅದೂ ಅಲ್ಲದೆ ತಯಾರಿ ಮಾಡಿದ ಮದ್ಯವನ್ನು ಎಲ್ಲಿಗೆ ಸರಬರಾಜು ಮಾಡುತ್ತಿದ್ದರೆಂಬ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ.

? ಕುಡೆಕಲ್ ಸಂತೋಷ್