ಮಡಿಕೇರಿ, ಸೆ.೧ : ಮಡಿಕೇರಿ ವಿಭಾಗದ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಕರ್ತವ್ಯದಲ್ಲಿದ್ದ, ಇದೀಗ ರಾಮನಾಥಪುರಕ್ಕೆ ವರ್ಗಾವಣೆ ಗೊಂಡಿರುವ ವ್ಯವಸ್ಥಾಪಕರನ್ನು ತಕ್ಷಣ ಸೇವೆಯಿಂದ ವಜಾಗೊಳಿಸಬೇಕೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ.ಚಂದ್ರಕಲಾ ಒತ್ತಾಯಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವ್ಯವಸ್ಥಾಪಕಿಯ ವಿರುದ್ಧದ ಆರೋಪಗಳು ಗಂಭೀರ ಸ್ವರೂಪದಿಂದ ಕೂಡಿರುವುದರಿಂದ ಕೇವಲ ವರ್ಗಾವಣೆ ಒಂದೇ ಶಿಕ್ಷೆಯಾಗಬಾರದು, ತಕ್ಷಣ ಇವರನ್ನು ಸೇವೆಯಿಂದ ವಜಾಗೊಳಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಕೆಎಸ್‌ಆರ್‌ಟಿಸಿ ನೌಕರ ಹೆಬ್ಬಾಲೆಯ ಅಭಿಷೇಕ್ ಎಂಬುವವರು ಇತ್ತೀಚೆಗೆ ಕೆಎಸ್‌ಆರ್‌ಟಿಸಿ ಡಿಸಿ ಹಾಗೂ ವ್ಯವಸ್ಥಾಪಕರ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಪ್ರಯತ್ನಕ್ಕೆ ವ್ಯವಸ್ಥಾಪಕರ ಕಿರುಕುಳವೇ ಕಾರಣವೆಂದು ಅಭಿಷೇಕ್ ಆರೋಪಿಸಿದ್ದಾರೆ. ಕಳೆದ ೮ ವರ್ಷಗಳಿಂದ ತಮ್ಮ ಪ್ರಭಾವ ಬಳಸಿ ಮಡಿಕೇರಿಯಲ್ಲೇ ಸೇವೆ ಸಲ್ಲಿಸುತ್ತಿದ್ದ ವ್ಯವಸ್ಥಾಪಕರ ವಿರುದ್ಧ ಕಿರುಕುಳದ ಆರೋಪ ಹೊರಿಸಿ ಇಲ್ಲಿನ ನೌಕರರು ಹಾಗೂ ಕಾರ್ಮಿಕ ವರ್ಗ ಹಲವು ಬಾರಿ ಲಿಖಿತ ರೂಪದಲ್ಲಿ ದೂರು ನೀಡಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿರಲಿಲ್ಲ.

ನೌಕರರ ಇಚ್ಛೆಯಂತೆ ವ್ಯವಸ್ಥಾಪಕರನ್ನು ವರ್ಗಾವಣೆಗೊಳಿಸಲೇಬೇಕೆಂದು ಕಳೆದ ೩ ತಿಂಗಳಿನಿAದ ನಾವುಗಳು ಮಾಡಿದ ಪ್ರಯತ್ನಕ್ಕೆ ಇದೀಗ ಫಲ ದೊರೆಯಿತು. ಆದರೆ ವರ್ಗಾವಣೆಯಾದರೂ ಕಳೆದ ಮೂರು ವಾರಗಳಿಂದ ಬಿಡುಗಡೆಗೊಳ್ಳದೆ ಮತ್ತೆ ತಮ್ಮ ಪ್ರಭಾವ ಬಳಸಿ ಮಡಿಕೇರಿಯಲ್ಲೇ ಠಿಕಾಣಿ ಹೂಡಿದ್ದರು. ಇವರಿಂದ ಮತ್ತಷ್ಟು ಕಿರುಕುಳ ಎದುರಿಸಬೇಕಾಗುತ್ತದೆ ಎನ್ನುವ ಆತಂಕದಲ್ಲಿ ಅಭಿಷೇಕ್ ಎಲ್ಲರೆದುರೇ ವಿಷ ಸೇವಿಸಿದ್ದಾರೆ ಎಂದು ಚಂದ್ರಕಲಾ ಆರೋಪಿಸಿದ್ದಾರೆ.