ಮಡಿಕೇರಿ, ಆ. ೩೧: ಮರಗೋಡಿನ ವಿವೇಕಾನಂದ ಯುವಕ ಸಂಘ ಹಾಗೂ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಕೈಲು ಮುಹೂರ್ತ ಅಂಗವಾಗಿ ೫೨ನೇ ವರ್ಷದ ಗ್ರಾಮಾಂತರ ಆಟೋಟ ಸ್ಪರ್ಧೆ ನಡೆಯಲಿದೆ.
ತಾ. ೩ ರಂದು ಮರಗೋಡು ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಬೆಳಿಗ್ಗೆ ೯.೩೦ ಗಂಟೆಯಿAದ ಪಂದ್ಯಾಟಗಳು ಆರಂಭಗೊಳ್ಳಲಿವೆ. ವಿವಿಧ ವಯೋಮಾನದವರಿಗೆ ಓಟ, ೧ನೇ ತರಗತಿಯವರಿಗೆ ಕಪ್ಪೆ ಹಾರುವುದು, ಹಿರಿಯ ಬಾಲಕರಿಗೆ ಮೂರು ಕಾಲಿನ ಓಟ, ಅಂಗನವಾಡಿ ಮಕ್ಕಳಿಗೆ ಕಾಳು ಹೆಕ್ಕುವುದು, ಪುರುಷ ಹಾಗೂ ಮಹಿಳೆಯರಿಗೆ ರಿಲೇ, ಹಗ್ಗಜಗ್ಗಾಟ ಗೋಣಿಚೀಲ ಓಟ, ಮಹಿಳೆಯರಿಗೆ ನೀರು ತುಂಬಿದ ಚೆಂಬಿನ ಓಟ, ಸೂಜಿ ನೂಲು ಓಟ, ಪುರುಷರಿಗೆ ಭಾರದ ಗುಂಡು ಎಸೆತ, ಸಾರ್ವಜನಿಕರಿಗೆ ತೆಂಗಿನ ಕಾಯಿಗೆ ಗುಂಡು ಹಾರಿಸುವ ಸ್ಪರ್ಧೆ ಸೇರಿದಂತೆ ಇನ್ನಿತರ ಕ್ರೀಡಾಕೂಟಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.