ಮಡಿಕೇರಿ, ಆ. ೩೧: ಭ್ರಷ್ಟಾಚಾರ ಆರೋಪ ಹೊತ್ತಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಲೋಕಾಯುಕ್ತ ಹಿರಿಯ ಅಧಿಕಾರಿಗಳಿಗೆ ಸಾರ್ವಜನಿಕ ಹಿತರಕ್ಷಣಾ ಸಮಿತಿ ಮನವಿ ಪತ್ರ ನೀಡಿದ್ದು, ಕೆಲವೊಂದು ಬೇಡಿಕೆ ಮುಂದಿಟ್ಟಿದೆ.

ತಾ. ೨೯ ರಂದು ಸಮಿತಿ ಅಧ್ಯಕ್ಷ ಅಜ್ಜಮಾಡ ಕಟ್ಟಿ ಮಂದಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಮನವಿ ಪತ್ರವನ್ನು ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಕಳುಹಿಸಿಕೊಡಲಾಗಿದೆ.

ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಅಧಿಕಾರಿಗಳು ಲಂಚ ಸ್ವೀಕರಿಸುವ ಪ್ರಕರಣಗಳು ಬೆಳಕಿಗೆ ಬಂದಿವೆ. ಭ್ರಷ್ಟಾಚಾರ ನಿರ್ಮೂಲನೆಗೆ ಕಠಿಣ ಕ್ರಮದ ಅಗತ್ಯತೆ ಇದೆ. ಲಂಚ ಪಡೆದ ಸರಕಾರಿ ಅಧಿಕಾರಿ, ಸಿಬ್ಬಂದಿಗಳನ್ನು ಬಂಧಿಸಿ ಸ್ಥಾನದಿಂದ ಅಮಾನತ್ತುಗೊಳಿಸಿ ವಶಪಡಿಸಿಕೊಂಡ ಹಣ, ಆಭರಣ, ಆಸ್ತಿಯನ್ನು ಸರಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು. ಸರಕಾರದ ಸವಲತ್ತು ಸ್ಥಗಿತಗೊಳಿಸಬೇಕು. ಇಂತಹ ಪ್ರಕರಣ ನ್ಯಾಯಾಲಯ ವ್ಯಾಪ್ತಿಗೆ ಬಂದರು ಸರಕಾರದೊಂದಿಗೆ ವ್ಯವಹರಿಸಿ ಕಠಿಣ ಕ್ರಮಕ್ಕೆ ಶಿಫಾರಸ್ಸು ಮಾಡಿ ಸೇವಾ ನಿಯಮಗಳಲ್ಲಿ ತಿದ್ದುಪಡಿ ತರಲು ಮುಂದಾಗಬೇಕು. ಸೇವಾ ನಿಯಮ ೨೮೫ರ ಪ್ರಕಾರ ಅಧಿಕಾರಿಗಳನ್ನು ಕಡ್ಡಾಯವಾಗಿ ನಿವೃತ್ತಿಗೊಳಿಸಲು ಅವಕಾಶವಿದ್ದು, ಇದನ್ನು ಕಾರ್ಯಗತಗೊಳಿಸಬೇಕು ಎಂದು ಪತ್ರದ ಮೂಲಕ ಸಮಿತಿ ಆಗ್ರಹಿಸಿದೆ.

ಸಭೆಯಲ್ಲಿ ಕಾರ್ಯಾಧ್ಯಕ್ಷ ಬಿ.ಎಸ್. ಕಾರ್ಯಪ್ಪ, ಉಪಾಧ್ಯಕ್ಷ ಎನ್.ಡಿ. ಚರ್ಮಣ, ಸಲಹೆಗಾರ ಸಿ.ಎನ್. ವಿಶ್ವನಾಥ್, ಪ್ರಧಾನ ಕಾರ್ಯದರ್ಶಿ ಎ.ಎಸ್. ಸತೀಶ್ ದೇವಯ್ಯ, ಖಜಾಂಜಿ ಎ.ಎನ್. ಮಾದಯ್ಯ, ಜಂಟಿ ಕಾರ್ಯದರ್ಶಿ ಕೆ.ಕೆ. ಬೆಳ್ಯಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.