ಕೂಡಿಗೆ, ಸೆ. ೧: ಕೂಡಿಗೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ, ಕೂಡಿಗೆ ಕ್ಲಸ್ಟರ್ ಸಂಪನ್ಮೂಲ ಕೇಂದ್ರದ ವತಿಯಿಂದ ಏರ್ಪಡಿಸಿದ್ದ ಶಿಕ್ಷಕರ ಸಮ್ಮಿಲನ ಕಾರ್ಯಕ್ರಮದಲ್ಲಿ ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳಲ್ಲಿ ನಿವೃತ್ತಿಗೊಂಡ, ಬೇರೆ ಶಾಲೆಗಳಿಗೆ ವರ್ಗಾವಣೆಗೊಂಡ ಶಿಕ್ಷಕರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.
ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಡಾ. ಸದಾಶಿವಯ್ಯ ಎಸ್. ಪಲ್ಲೇದ್ ಮಾತನಾಡಿ, ಶಿಕ್ಷಣ ಇಲಾಖೆಯ ವತಿಯಿಂದ ಕೂಡಿಗೆಯಲ್ಲಿ ಸೆಪ್ಟೆಂಬರ್ನಲ್ಲಿ ನಡೆಯಲಿರುವ ಮಕ್ಕಳ ರಾಷ್ಟಿçÃಯ ಹಾಕಿ ಟೂರ್ನಿಗೆ ಎಲ್ಲಾ ಶಿಕ್ಷಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಚಿತ್ರಕಲಾ ಸಂಪನ್ಮೂಲ ಶಿಕ್ಷಕ ಉ.ರಾ. ನಾಗೇಶ್, ಕೂಡಿಗೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಸ್.ಎ. ಯೋಗೇಶ್ ಕೂಡಿಗೆ ಸಿಆರ್ಪಿ ಕೆ.ಶಾಂತಕುಮಾರ್, ಕುಶಾಲನಗರ ಸಿಆರ್ಪಿ ಎಸ್.ವಿ. ಸಂತೋಷ್ ಕುಮಾರ್ ಇವರುಗಳು ಮಾತನಾಡಿದರು.
ನಿವೃತ್ತಗೊಂಡ ಕೂಡಿಗೆ ಸದ್ಗುರು ಅಪ್ಪಯ್ಯಸ್ವಾಮಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಸಿ.ಎಂ. ಸುಲೋಚನ, ಚಿಕ್ಕತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಹೆಚ್.ಬಿ. ಗೌರಮ್ಮ ಹಾಗೂ ವರ್ಗಾವಣೆಗೊಂಡ ಕೂಡಿಗೆ ಅಂಜೆಲಾ ವಿದ್ಯಾನಿಕೇತನ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ನೀಲಪ್ಪ ಮಡಿವಾಳ್ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.
ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ದಯಾನಂದ ಪ್ರಕಾಶ್, ಸಮನ್ವಯ ಶಿಕ್ಷಣ ಸಂಪನ್ಮೂಲ ವ್ಯಕ್ತಿಗಳಾದ ಟಿ.ವಿ. ಶೈಲಾ, ಹೆಚ್.ಆರ್. ರತ್ನಮ್ಮ, ಸಿಆರ್ಪಿ ಪ್ರೇಮ, ವಿವಿಧ ಶಾಲಾ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ಪಾಲ್ಗೊಂಡಿದ್ದರು.