ಮಡಿಕೇರಿ, ಆ. ೩೧ : ಅಕ್ರಮ ಮದ್ಯ ಮಾರಾಟ, ಕಳ್ಳಭಟ್ಟಿ ಸಾರಾಯಿ ತಯಾರಿಕೆ, ಇನ್ನಿತರ ಚಟುವಟಿಕೆಗಳು ಎಲ್ಲೆಡೆ ಸರ್ವೇ ಸಾಮಾನ್ಯ., ಆದರೆ ಕೊಡಗು ಜಿಲ್ಲೆಯಲ್ಲಿ ನಕಲಿ ಮದ್ಯ ತಯಾರಿಕೆ(ಬ್ರಾಂಡಿ, ವಿಸ್ಕಿ, ರಮ್) ಘಟಕಗಳೂ ತಲೆಯೆತ್ತಿ ಅಧಿಕಾರಿಗಳ ದಾಳಿಯಿಂದ ಪತ್ತೆಯಾಗಿ ವಶಪಡಿಸಿಕೊಂಡ ಘಟನೆಗಳು ಇನ್ನೂ ಕೂಡ ನೆನಪಿನಲ್ಲಿರು ವಂತೆಯೇ ಇದೀಗ ಮತ್ತೆ ಇಂತಹುದೇ ಮತ್ತೊಂದು ಘಟಕ ಪತ್ತೆಯಾಗಿದೆ. ಕೇರಳದ ವ್ಯಕ್ತಿಯೋರ್ವ ಕೊಡಗು ಜಿಲ್ಲೆಯೊಳಗೆ ನುಸುಳಿ ನಕಲಿ ಮದ್ಯ ತಯಾರು ಮಾಡುತ್ತಿದ್ದುದ್ದನ್ನು ಕೊಡಗು ಜಿಲ್ಲಾ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಕೇರಳ ಮೂಲದ ವ್ಯಕ್ತಿ ಹಾಸಿಂ (೪೭) ಎಂಬಾತ ಜಿಲ್ಲೆಯ ಗಡಿಭಾಗವಾದ ಭಾಗಮಂಡಲ ಬಳಿಯ ತಾವೂರಿನಲ್ಲಿನ ಮನೆಯಲ್ಲಿ ನಕಲಿ ಮದ್ಯ ತಯಾರು ಮಾಡಿ ಸರಬರಾಜು ಮಾಡುತ್ತಿರುವ ಬಗ್ಗೆ ದೊರೆತ ಮಾಹಿತಿ ಮೇರೆಗೆ ಕೊಡಗು ಜಿಲ್ಲಾ ಪೊಲೀಸರು ದಾಳಿ ಮಾಡಿ ಆರೋಪಿಯನ್ನು ವಶಕ್ಕೆ ಪಡೆದು ಮದ್ಯ ತಯಾರಿಕೆಗೆ ಬಳಸಲಾದ ಸಾಮಗ್ರಿ ಗಳನ್ನು ವಶ ಪಡಿಸಿಕೊಂಡಿದ್ದಾರೆ.

ಮೂಲತಃ ಕೇರಳ ರಾಜ್ಯದ ಕಾಸರಗೋಡುವಿನ ಚೆರ್ಕಳ ನಿವಾಸಿ ಹಾಸಿಂ ವಿವಾಹಿತನಾಗಿದ್ದು, ತಾವೂರು ಗ್ರಾಮದಲ್ಲಿಯೂ ಓರ್ವಳನ್ನು ಮದುವೆಯಯಾಗಿ ಇಲ್ಲಿಯೇ ನೆಲೆಸಿದ್ದ. ಕುಗ್ರಾಮದ ಸುತ್ತ ಮುತ್ತಲಿನ ಆಗು ಹೋಗುಗಳ ಬಗ್ಗೆ ಪರಿಚಯಿಸಿಕೊಂಡ ಆರೋಪಿ ಮನೆಯೊಳಗಡೆಯೇ ನಕಲಿ ಮದ್ಯ ತಯಾರಿಗೆ ಇಳಿದ. ಅಕ್ರಮವಾಗಿ ಸ್ಪಿರಿಟ್ ತರಿಸಿಕೊಂಡು ವಿವಿಧ ರೀತಿಯ ಮದ್ಯಗಳನ್ನು ತಯಾರಿಸಿ ಅದಕ್ಕೆ ಸರಿಯಾದ ಲೇಬಲ್‌ಗಳನ್ನು ಅಂಟಿಸಿ ಮುಚ್ಚಳಗಳನ್ನು ಹಾಕಿ ನೆರೆಯ ಕೇರಳ ರಾಜ್ಯಕ್ಕೆ ಹಾಗೂ ಜಿಲ್ಲೆಯೊಳಗೂ

(ಮೊದಲ ಪುಟದಿಂದ) ಸರಬರಾಜು ಮಾಡುತ್ತಿದ್ದ ಎನ್ನಲಾಗಿದೆ. ಆತನ ಬಗ್ಗೆ ಸಂಶಯಗೊAಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ಮಾಡಿದ್ದಾರೆ. ಈ ಸಂದರ್ಭ ವಿವಿಧ ಮದ್ಯಗಳ ಲೇಬಲ್‌ಗಳು.., ಲಕ್ಷಗಟ್ಟಲೆ ಮುಚ್ಚಳಗಳು., ಮದ್ಯಗಳನ್ನು ತುಂಬಿಸುವ ಪ್ಲಾಸ್ಟಿಕ್ , ಮದ್ಯದ ವಿವಿಧ ಸ್ಯಾಂಪಲ್‌ಗಳು ಬಾಟಲಿಗಳು ಪತ್ತೆಯಾಗಿವೆ. ಅಷ್ಟೇ ಅಲ್ಲ ಅಬಕಾರಿ ಇಲಾಖೆಯ ಮುದ್ರೆ ಇರುವ ಸೀಲ್ ಹೊಂದಿರುವ ಸ್ಟಿಕ್ಕರ್‌ಗಳೂ ಸಿಕ್ಕಿವೆ.

ಇದರೊಂದಿಗೆ ಡ್ರಂಗಳಲ್ಲಿ ಮದ್ಯಕ್ಕೆ ಬಳಸಲಾಗುವ ಸ್ಪಿರಿಟ್ ಕೂಡ ಸಿಕ್ಕಿವೆ.

ಕೊರಿಯರ್ ನೆಪೋಲಿಯನ್..!

ಈತನ ಮನೆ ಒಳಗಡೆ ಜಾಲಾಡಿದಾಗ ಸಿಕ್ಕ ಬಾಟಲಿಗಳು ಹಾಗೂ ಮದ್ಯದ ಲೇಬಲ್ ಗಳನ್ನು ಹೋಲಿಕೆ ಮಾಡಿದಾಗ ಬಹುತೇಕ ಕೊರಿಯರ್ ನೆಪೊಲಿಯನ್ ಎಂಬ ಮದ್ಯದ ಕುರುಹು ಸಿಗುತ್ತದೆ. ಈ ಮದ್ಯವನ್ನು ಆತ ಎಲ್ಲೆಲ್ಲಿಗೆ ಸರಬರಾಜು ಮಾಡಿದ್ದಾನೋ ಎಂಬದು ತನಿಖೆ ಯಿಂದಷ್ಟೇ ತಿಳಿಯಬೇಕಿದೆ.

ವ್ಯವಸ್ಥಿತವಾಗಿ ನಡೆಸಲಾಗುತ್ತಿದ್ದ ಈ ನಕಲಿ ಮದ್ಯ ತಯಾರಿಕಾ ಘಟಕವನ್ನು ಪತ್ತೆ ಹಚ್ಚಿರುವ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಜಗದೀಶ್, ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಭಾಗಮಂಡಲ ಠಾಣಾಧಿಕಾರಿ ಶೋಭ ಲಮಾಣಿ ನೇತೃತ್ವದಲ್ಲಿ ಕೊಡಗು ಜಿಲ್ಲಾ ಅಪರಾಧ ಪತ್ತೆದಳದವರು., ಗ್ರಾಮಾಂತರ ಪೊಲೀಸರು ಅಕ್ರಮದಲ್ಲಿ ಭಾಗಿಯಾಗಿರುವವರ ಪತ್ತೆಗೆ ಜಾಲ ಬೀಸಿದ್ದಾರೆ.

? ಕುಡೆಕಲ್ ಸಂತೋಷ್