ಮಡಿಕೇರಿ, ಸೆ. ೧: ಜಿಲ್ಲೆಯಲ್ಲಿ ದಿನೇ ದಿನೇ ಬಿಸಿಲಿನ ತಾಪ ಹೆಚ್ಚುತ್ತಿದ್ದು, ಮಳೆಗಾಲದ ಸಂದರ್ಭದ ಈ ಅವಧಿಯಲ್ಲೇ ಜನರು ಬಸವಳಿಯುವಂತಾಗಿದೆ.

ಆಗಸ್ಟ್ ತಿಂಗಳು ಪೂರ್ಣಗೊಂಡಿದೆ. ಆದರೂ ಜಿಲ್ಲೆಯಲ್ಲಿ ಈ ಬಾರಿ ಮಳೆ ಕೈಕೊಟ್ಟಿದ್ದು, ಈಗಿನಿಂದಲೇ ಹಲವು ಸಮಸ್ಯೆಗಳು ಉದ್ಭವವಾಗುತ್ತಿದೆ.

(ಮೊದಲ ಪುಟದಿಂದ) ಬಹುತೇಕ ಕಡೆಗಳಲ್ಲಿ ನೀರಿನ ಪ್ರಮಾಣ ದಿನೇ ದಿನೇ ಇಳಿಕೆಯಾಗುತ್ತಿದೆ. ನದಿ - ಕೆರೆ - ತೋಡುಗಳು ಮಳೆಗಾಲ ಇರಬೇಕಿದ್ದ ಈ ಸಂದರ್ಭ ಸಾಧಾರಣವಾಗಿ ತುಂಬಿತುಳುಕುತ್ತಿತ್ತು. ಆದರೆ ಈ ಬಾರಿ ಭತ್ತದ ಗದ್ದೆಗಳೂ ಸೇರಿದಂತೆ ಭೂಮಿ ಬಿಸಿಲಿನ ತಾಪಕ್ಕೆ ನಲುಗುತ್ತಿದೆ. ಸದ್ಯದ ಮಟ್ಟಿಗೆ ವಾತಾವರಣವನ್ನು ಅಂದಾಜು ಮಾಡಲು ಸಾಧ್ಯವಾಗುತ್ತಿಲ್ಲ.

ಆಗೊಮ್ಮೆ - ಹೀಗೊಮ್ಮೆ ಮೋಡ ಆವರಿಸುತ್ತಿದೆಯಾದರೂ ಮಳೆಯಾಗಿ ಪರಿವರ್ತನೆಗೊಳ್ಳುತ್ತಿಲ್ಲ. ಪ್ರಸ್ತುತ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಕೇವಲ ಕಾಲಿನ ಮಟ್ಟಕ್ಕೆ ಮಾತ್ರ ನೀರಿನ ಪ್ರಮಾಣವಿದೆ. ಧಾರ್ಮಿಕ ಕ್ರಿಯೆಯಂತೆ ಪಿಂಡ ಪ್ರದಾನ ಮಾಡಲು ತೆರಳುವವರು ಸಂಗಮದಲ್ಲಿ ಮುಳುಗಿ ಕೈಂಕರ್ಯ ನಡೆಸಲು ಈಗಲೇ ಕಷ್ಟಸಾಧ್ಯವಾಗುತ್ತಿರುವ ಹಂತಕ್ಕೆ ತಲುಪಿದೆ ಎಂದು ಹಲವರು ‘ಶಕ್ತಿ’ಯೊಂದಿಗೆ ಅನುಭವ ಹಂಚಿಕೊAಡಿದ್ದಾರೆ.

ಈಗಾಗಲೇ ರಾಜ್ಯದಲ್ಲಿ ಕಾವೇರಿ ಜಲದ ಕುರಿತಾಗಿ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ನಡುವೆ ‘‘ನೀರಿನ ಯುದ್ಧ’’ವೂ ಶುರುವಾಗುತ್ತಿದೆ. ಗಂಭೀರ ವಿಚಾರವೆಂದರೆ ಕಾವೇರಿ ತವರಾದ ಕೊಡಗಿನ ಪರಿಸ್ಥಿತಿಯೇ ಪ್ರಸ್ತುತ ಆತಂಕಕಾರಿಯಾಗಿದೆ ಹಾಗೂ ಕಾವೇರಿ ಹರಿಯುವ ಪ್ರದೇಶ ಈಗಾಗಲೇ ಬರಿದಾಗುತ್ತಿದೆ.