ನಗದು-ವಾಹನಗಳ ವಶ
ಸೋಮವಾರಪೇಟೆ, ಆ.೩೧ : ಅಕ್ರಮವಾಗಿ ಇಸ್ಪೀಟ್ ಆಡುತ್ತಿದ್ದ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿ ನಾಲ್ವರು ಜೂಜುಕೋರರ ಸಹಿತ ೨೦ ಸಾವಿರ ನಗದು, ೬ ಮೊಬೈಲ್ ಹಾಗೂ ನಾಲ್ಕು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಪಟ್ಟಣ ಸಮೀಪದ ವಳಗುಂದ ರಸ್ತೆಯ ಬದಿಯಲ್ಲಿರುವ ಕಾಫಿ ತೋಟದ ಸಮೀಪ ಅಕ್ರಮವಾಗಿ ಜೂಜಾಡುತ್ತಿರುವ ಬಗ್ಗೆ ದೊರೆತ ಮಾಹಿತಿಯ ಮೇರೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಸ್ಥಳದಲ್ಲಿ ಪಣಕ್ಕಿಟ್ಟಿದ್ದ ೨೦ ಸಾವಿರ ನಗದು ಸಹಿತ, ಜೂಜುಕೋರರಿಗೆ ಸೇರಿದ ಎರಡು ಕಾರು, ೨ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಕಾರ್ಯಾಚರಣೆ ಸಂದರ್ಭ ಸ್ಥಳದಿಂದ ಪರಾರಿಯಾಗಿದ್ದ ಜೂಜುಕೋರರ ಪೈಕಿ ನಾಲ್ವರನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿಗಳ ವಿರುದ್ಧ ಮೊಕದಮ್ಮೆ ದಾಖಲಿಸಿದ್ದಾರೆ.
ಉಳಿದ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಸ್ಥಳದಲ್ಲಿದ್ದ ಒಂದು ಹೋಂಡಾ ಅಮೇಜ್ ಕಾರು, ಒಂದು ಮಾರುತಿ ಓಮ್ನಿ, ಎರಡು ದ್ವಿಚಕ್ರ ವಾಹನ ಸಹಿತ ೨೦ ಸಾವಿರ ನಗದು ಹಾಗೂ ೬ ಮೊಬೈಲ್ಗಳನ್ನು ವಶ ಪಡಿಸಿಕೊಂಡಿದ್ದು, ಆರೋಪಿಗಳ ವಿರುದ್ಧ ಮೊಕದಮ್ಮೆ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ.
ಸೋಮವಾರಪೇಟೆ ಪೊಲೀಸ್ ಇನ್ಸ್ಪೆಕ್ಟರ್ ರಾಮಚಂದ್ರ ನಾಯಕ್ ಅವರ ಮಾರ್ಗದರ್ಶನದಲ್ಲಿ, ಪೊಲೀಸ್ ಠಾಣಾಧಿಕಾರಿ ಪಿ. ರಮೇಶ್ಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಪರಾಧ ವಿಭಾಗದ ಸಿಬ್ಬಂದಿಗಳಾದ ಬಸಪ್ಪ ಕೊಟಗಿ, ಕೆ.ಎನ್. ಮಲ್ಲೇಶ್, ಲೋಕೇಶ್, ಮಂಜುನಾಥ್ ಅವರುಗಳು ಭಾಗವಹಿಸಿದ್ದರು.