ಶ್ರೀಮಂಗಲ, ಆ. ೩೦: ಕಾಡಾನೆಗಳಿಂದ ಅಪಾರ ಬೆಳೆ ನಷ್ಟ ಅನುಭವಿಸಿದ ಬೆಳೆಗಾರನ ಮೇಲೆಯೇ ಅರಣ್ಯ ಇಲಾಖಾಧಿಕಾರಿ ಪೊಲೀಸ್ ಮೊಕದ್ದಮೆ ದಾಖಲಿಸಿರುವ ಕ್ರಮದ ಬಗ್ಗೆ ಬಿರುನಾಣಿ ವಲಯ ಬೆಳೆಗಾರ ಒಕ್ಕೂಟ ತೀವ್ರವಾಗಿ ಅಸಮಾಧಾನ ವ್ಯಕ್ತಪಡಿಸಿದೆ.

ಈ ಬಗ್ಗೆ ಬಿರುನಾಣಿಯ ತುರ್ತು ಸಭೆಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಬೊಳ್ಳೆರ ಪೊನ್ನಪ್ಪ ಅವರು ಹಲವು ದಶಕಗಳಿಂದ ಕಷ್ಟಪಟ್ಟು ತೋಟ ಮಾಡಿ ಅದರಲ್ಲಿ ಫಸಲು ಬರುವ ಸಮಯದಲ್ಲಿ ಕಾಡಾನೆಗಳು ತೋಟದ ಕಾಫಿ ಬೆಳೆಯನ್ನು ದ್ವಂಸ ಮಾಡಿದರೆ ಬೆಳೆಗಾರನ ಸ್ಥಿತಿ ಏನಾಗಬೇಕು? ಎಂದು ಅವರು ಪ್ರಶ್ನಿಸಿದರು.

ತೋಟದಲ್ಲಿ ಕಾಡಾನೆಗಳು ಮರಿ ಹಾಕಿದಾಗ ಕೂಡಲೇ ಆಗಮಿಸಿ ಅರಣ್ಯ ಇಲಾಖೆಯವರು ಕಾರ್ಯಪ್ರವೃತ್ತರಾಗಿದ್ದರೆ ಇಷ್ಟು ಅಪಾರ ಪ್ರಮಾಣದಲ್ಲಿ ಕಾಫಿ ತೋಟ ನಷ್ಟ ಆಗುತ್ತಿರಲಿಲ್ಲ. ಬಾಡಗರಕೇರಿ ಗ್ರಾಮದ ಅರಣ್ಯ ಸರಹದ್ದಿನಲ್ಲಿ ಸೋಲಾರ್ ಬೇಲಿ ದುರಸ್ತಿ ಮಾಡದೇ ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸಿತ್ತು. ಬೆಳೆಗಾರರ ಒಂದು ವರ್ಷದ ಫಸಲು ನಾಶವಾಗಿದ್ದು, ಇದರೊಂದಿಗೆ ೨೦ -೨೫ ವರ್ಷದ ಕಾಫಿ ಗಿಡಗಳು ಬೇರು ಸಹಿತ ಕಾಡಾನೆಗಳು ಕಿತ್ತುಹಾಕಿದ್ದು, ಪುನಃ ಆ ಗಿಡಗಳನ್ನು ಫಸಲು ಬರುವಂತೆ ಮಾಡಲು ಬೆಳೆಗಾರ ಎಷ್ಟು ಶ್ರಮವಹಿಸಬೇಕು ಎಂದು ಪ್ರಶ್ನಿಸಿದ್ದಾರೆ.

ಕರ್ತವ್ಯ ಲೋಪ ಎಸಗಿ, ಸಂತ್ರಸ್ತ ಬೆಳೆಗಾರನ ವಿರುದ್ಧ ಪ್ರಕರಣ ದಾಖಲಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಭೆಯಲ್ಲಿ ಒಕ್ಕೂಟದ ಉಪಾಧ್ಯಕ್ಷ ಅಣ್ಣಳಮಾಡ ಲಾಲಾ ಅಪ್ಪಣ್ಣ, ಸದಸ್ಯರಾದ ಕರ್ತಮಾಡ ಸುನಂದ, ಕಾಳಿಮಾಡ ರಸಿಕ ಹಾಜರಿದ್ದರು.