ಮಡಿಕೇರಿ, ಆ. ೩೦: ಮಡಿಕೇರಿಯಲ್ಲಿ ಉಪ ವಲಯ ಅರಣ್ಯಾಧಿಕಾರಿ (ಡಿ.ಆರ್.ಎಫ್.ಓ.) ಆಗಿ ಕಾರ್ಯನಿರ್ವಹಿಸುತ್ತಿದ್ದ ಜಿ.ಸಿ. ರಶ್ಮಿ (೨೬) ಕಳೆದ ರಾತ್ರಿ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮೂಲತಃ ಮಂಡ್ಯ ಜಿಲ್ಲೆಯ ದುದ್ದ ಹೋಬಳಿಯ ಗಾಣದಾಳು ಗ್ರಾಮದ ದಿ. ಚಂದ್ರಶೇಖರ್ ಎಂಬವರ ಪುತ್ರಿ ಜಿ.ಸಿ. ರಶ್ಮಿ ಕಳೆದ ೨ ವರ್ಷಗಳಿಂದ ಉಪ ವಲಯ ಅರಣ್ಯಾಧಿಕಾರಿಯಾಗಿ ಕರ್ತವ್ಯದಲ್ಲಿದ್ದರು. ಮೈಸೂರು ರಸ್ತೆಯಲ್ಲಿರುವ ಅರಣ್ಯ ಭವನದ ನಿರೀಕ್ಷಣಾ ಮಂದಿರದ ಬಳಿಯಿರುವ ವಸತಿಗೃಹದಲ್ಲಿ ವಾಸವಿದ್ದ ರಶ್ಮಿ ಅವರು ಅವಿವಾಹಿತ ರಾಗಿದ್ದು, ನಿನ್ನೆ ರಾತ್ರಿ ಸೀಲಿಂಗ್ ಫ್ಯಾನ್‌ಗೆ ವೇಲ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಪ್ರಕರಣ ದಾಖಲು

ಘಟನೆಗೆ ಸಂಬAಧಿಸಿದAತೆ ರಶ್ಮಿ ಅವರ ತಾಯಿ ಲೀಲಾವತಿ ಎಂಬವರು ಮಡಿಕೇರಿ ನಗರ ಠಾಣೆಗೆ ದೂರು ನೀಡಿದ್ದು, ರಶ್ಮಿ ಅವರ ಪರಿಚಿತ ವ್ಯಕ್ತಿಯೊಬ್ಬರು ಕಳೆದ ರಾತ್ರಿ ೧೧.೫೦ ಗಂಟೆ ಸುಮಾರಿಗೆ ಕರೆ ಮಾಡಿ ರಶ್ಮಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದ್ದು, ಪ್ರಸ್ತುತ ಮೈಸೂರಿನಲ್ಲಿ ವಾಸವಿದ್ದ ತಾವು ಹೊರಟು ಬೆಳಗ್ಗಿನ ಜಾವ ೨ ಗಂಟೆ ಸುಮಾರಿಗೆ ಮಡಿಕೇರಿಗೆ ತಲುಪಿದ ವೇಳೆ ರಶ್ಮಿ ಮೃತದೇಹ ಜಿಲ್ಲಾಸ್ಪತ್ರೆಯಲ್ಲಿತ್ತು. ನೇಣು ಬಿಗಿದುಕೊಂಡಿದ್ದ ರಶ್ಮಿ ಅವರನ್ನು ಜೀವವಿರಬಹುದೆಂದು ಭಾವಿಸಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತಾದರೂ, ಪರೀಕ್ಷಿಸಿದ ವೈದ್ಯರು ರಶ್ಮಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ರಶ್ಮಿ ಯಾವುದೋ ವಿಚಾರದಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಶ್ಮಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ನೀಡಿದ ಆ ಅಪರಿಚಿತ ವ್ಯಕ್ತಿಯ ಮೇಲೆ ಸಂಶಯವಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಡಿಕೇರಿ ನಗರ ಪೊಲೀಸರು ಸಂಶಯಾಸ್ಪದ ಸಾವು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.