ಕುಶಾಲನಗರ, ಆ. ೩೧: ಕೇಂದ್ರ ಸರ್ಕಾರದಿಂದ ಕುಶಾಲನಗರ ತಾಲೂಕಿನ ಮುಳ್ಳುಸೋಗೆ ಗ್ರಾಮ ಪಂಚಾಯಿತಿಗೆ ದೊರಕಿದ ರಾಷ್ಟçಮಟ್ಟದ ‘ನಾನಾಜಿ ದೇಶಮುಖ್ ಸರ್ವೋತ್ತಮ್ ಪಂಚಾಯತ್ ಸತತ ವಿಕಾಸ' ಪುರಸ್ಕಾರವನ್ನು ಇದೀಗ ಮಣಿಪುರ ರಾಜ್ಯಕ್ಕೆ ವರ್ಗಾಯಿಸಲಾಗಿದೆ.
ರಾಷ್ಟçಮಟ್ಟದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ದೇಶದ ಮೂರು ಪಂಚಾಯಿತಿಗಳಿಗೆ ನೀಡಲಾಗುತ್ತಿದ್ದ ಪ್ರಶಸ್ತಿಯಲ್ಲಿ ಕುಶಾಲನಗರ ತಾಲೂಕಿನ ಮುಳ್ಳುಸೋಗೆ ಗ್ರಾಮ ಪಂಚಾಯಿತಿಗೆ ಪ್ರಥಮ ಬಹುಮಾನವಾಗಿ ರೂ. ೧.೫೦ ಕೋಟಿ ಬಂದಿತ್ತು. ಇದನ್ನು ಅಭಿವೃದ್ಧಿ ಕಾರ್ಯಕ್ಕೆ ಬಳಕೆ ಮಾಡಬೇಕಾಗಿತ್ತು.
ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಕುಶಾಲನಗರ ಪುರಸಭೆಯೊಂದಿಗೆ ವಿಲೀನಗೊಂಡ ಹಿನ್ನೆಲೆಯಲ್ಲಿ ಘೋಷಣೆಯಾಗಿದ್ದ ಪುರಸ್ಕಾರ ಇದೀಗ ಮಣಿಪುರದ ಪಾಲಾಗಿದೆ. ೨೦೨೩ ಏಪ್ರಿಲ್ ತಿಂಗಳಿನಿAದ ಮುಳ್ಳುಸೋಗೆ ಕುಶಾಲನಗರ ಪುರಸಭೆಗೆ ವಿಲೀನಗೊಂಡಿದೆ.
ಮಣಿಪುರ ರಾಜ್ಯದ ಗ್ರಾಮ ಒಂದಕ್ಕೆ ಎರಡನೇ ಬಹುಮಾನ ಘೋಷಣೆಯಾಗಿತ್ತು. ಇದೀಗ ಪ್ರಥಮ ಬಹುಮಾನವನ್ನು ಆ ರಾಜ್ಯದ ಗ್ರಾಮಕ್ಕೆ ನೀಡಲಾಗುತ್ತಿದೆ.
೨೦೨೧-೨೨ ನೇ ಸಾಲಿನಲ್ಲಿ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಕುಶಾಲನಗರ ತಾಲೂಕಿನ ಮುಳ್ಳುಸೋಗೆ ಗ್ರಾಮ ಪಂಚಾಯಿತಿಯನ್ನು ಅತ್ಯುತ್ತಮ ಗಾ.ಪಂ. ಎಂದು ಕೇಂದ್ರ ಸರ್ಕಾರ ಘೋಷಿಸಿ ೧.೫ ಕೋಟಿ ರೂ.ಗಳ ಬಹುಮಾನ ನೀಡಿ ಪಂಚಾಯಿತಿಯನ್ನು ಆಯ್ಕೆ ಮಾಡಿತ್ತು.
ಕಳೆದ ಕೆಲವು ವರ್ಷಗಳಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಆರ್. ಸುಮೇಶ್ ನೇತೃತ್ವದಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಜನಪ್ರತಿನಿಧಿಗಳ ಮುಖಾಂತರ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ದೇಶದಲ್ಲಿ ಪ್ರಥಮ ಸ್ಥಾನ ಗಳಿಸಿರುವ ಬಗ್ಗೆ ತಮಗೆ ತುಂಬಾ ಹೆಮ್ಮೆ ಉಂಟಾಗಿತ್ತು. ಇದೀಗ ಪ್ರಶಸ್ತಿ ವಾಪಸಾದ ಬಗ್ಗೆ ಬೇಸರ ತರಿಸಿದೆ ಎಂದು ಪ್ರಸಕ್ತ ಮಾದಾಪುರದ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಎಂ.ಆರ್. ಸುಮೇಶ್ ‘ಶಕ್ತಿ’ಯೊಂದಿಗೆ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಈ ಬಹುಮಾನವನ್ನು ರಾಷ್ಟçಮಟ್ಟದಲ್ಲಿ ನೀಡಲಾಗುತ್ತಿದ್ದು, ಪ್ರಶಸ್ತಿಯನ್ನು ಪಡೆದ ರಾಜ್ಯದ ಏಕೈಕ ಗ್ರಾಮ ಪಂಚಾಯಿತಿ ಎನ್ನುವ ಹೆಗ್ಗಳಿಕೆ ಕುಶಾಲನಗರ ತಾಲೂಕಿನ ಮುಳ್ಳುಸೋಗೆ ಗ್ರಾಮ ಪಂಚಾಯಿತಿಯದಾಗಿತ್ತು. -ಚಂದ್ರಮೋಹನ್