ಗುಡ್ಡೆಹೊಸೂರು, ಆ. ೩೧: ಗುಡ್ಡೆಹೊಸೂರು ಸುತ್ತಮುತ್ತಲಿನ ಹಲವಾರು ಗ್ರಾಮಗಳಲ್ಲಿ ರೈತರು ಬೆಳೆದ ಮುಸುಕಿನ ಜೋಳ ಒಣಗುವ ಹಂತ ತಲುಪಿದೆ. ಹಲವು ರೈತರ ಬೆಳೆ ಒಣಗಿ ತರಗೆಲೆಯಂತಾಗಿದೆ.

ಜೋಳದ ಹಾಲು ಕಟ್ಟುವ ಸಮಯದಲ್ಲಿ ಜೋಳಕ್ಕೆ ಮಳೆ ಅತ್ಯವಶ್ಯಕ ಆದರೆ ಒಂದು ತಿಂಗಳಿನಿAದ ಸರಿಯಾಗಿ ಮಳೆ ಬಾರದ ಹಿನ್ನೆಲೆಯಲ್ಲಿ ಜೋಳದ ಬೆಳೆ ಸಂಪೂರ್ಣ ನೆಲಕಚ್ಚುವ ಹಂತದಲ್ಲಿದೆ. ಈ ಭಾಗದಲ್ಲಿ ಕಾಫಿ, ಕರಿಮೆಣಸು ಉದುರುತ್ತಿವೆ. ಕೇಲವು ಭಾಗಗಳಲ್ಲಿ ಶುಂಠಿ ಬೆಳೆಯು ರೋಗಕ್ಕೆ ತುತ್ತಾಗುತ್ತಿದೆ. ಇನ್ನೂ ಮಳೆ ಬಂದರು ರೈತರ ಕೈಗೆ ಜೋಳದ ಬೆಳೆ ಸಿಗುವುದು ಅನುಮಾನ. ಮುಖ್ಯವಾಗಿ ಬಸವನಹಳ್ಳಿ, ಗುಡ್ಡೆಹೊಸೂರು, ಬಾಳುಗೋಡು, ಅತ್ತೂರು, ಗೊಂದಿಬಸವನಹಳ್ಳಿ, ಬೆಟ್ಟಗೇರಿ, ಹೊಸಕಾಡು ಸುಂದರನಗರ ಮುಂತಾದ ಪ್ರದೇಶಗಳಲ್ಲಿ ಬೆಳೆದಿರುವ ಮುಸುಕಿನ ಜೋಳ ಸಂಪೂರ್ಣ ನಾಶವಾಗುತ್ತಿವೆ.

ಕೆಲವೇ ಕೆಲವು ರೈತರು ಕೊಳವೆ ಬಾವಿಯ ನೀರನ್ನು ಬಳಸಿ ತಮ್ಮ ಬೆಳೆಗಳನ್ನು ಕಾಪಾಡುವ ದೃಶ್ಯ ಕಂಡುಬರುತ್ತಿದೆ. ಕುಶಾಲನಗರ ತಾಲೂಕು ಸೇರಿದಂತೆ ಕೊಡಗು ಜಿಲ್ಲೆ ಸಂಪೂರ್ಣ ಬರಗಾಲ ಪ್ರದೇಶವಾದಂತಿದೆ. ಚಿಕ್ಲಿಹೊಳೆ ಜಲಾಶಯದ ನೀರು ಕಾಲುವೆ ಮೂಲಕ ಕೊನೆಯ ಹಂತ ತಲುಪುತ್ತಿದೆ, ರೈತರ ಗದ್ದೆಗಳಿಗೆ ತಡವಾಗಿ ತಲುಪಿದರೂ ಮುಂದೆ ಮಳೆ ಬಾರದಿದ್ದಲ್ಲಿ ಅಣೆಕಟ್ಟೆಯ ನೀರು ಸದ್ಯದಲ್ಲಿ ಸಂಪೂರ್ಣ ಬರಿದಾಗಲಿದೆ. ಭತ್ತದ ಗದ್ದೆಗಳು ಒಣಗಲಿವೆ. ಕಾವೇರಿ ನದಿಯ ನೀರು ದಿನದಿನಕ್ಕೂ ಭಾರೀ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ.

-ಗಣೇಶ್ ಕುಡೆಕಲ್