ಗೋಣಿಕೊಪ್ಪಲು, ಆ. ೩೦: ತನ್ನ ಬೆವರನ್ನು ಬಸಿದು, ಇರುವ ಫಲವತ್ತದ ಭೂಮಿಯನ್ನು ಉತ್ತಿ, ಬಿತ್ತಿ, ಹಸನು ಮಾಡುವ ನಾಡಿನ ಅನ್ನದಾತ ಇದೀಗ ವರುಣ ಅವಕ್ರಫೆಯಿಂದ ಕಷ್ಟಕ್ಕೆ ಸಿಲುಕಿದ್ದಾನೆ.

ಮಳೆಯನ್ನೇ ನಂಬಿರುವ ಕೊಡಗಿನ ಬಹುತೇಕ ರೈತರು ಅದರಲ್ಲೂ ವಿಶೇಷವಾಗಿ ದಕ್ಷಿಣ ಕೊಡಗಿನ ಬಹು ಭಾಗದ ಭತ್ತ ಬೆಳೆಯುವ ರೈತರು ಈ ಸಾಲಿನ ಮಳೆ ಕೈ ಕೊಟ್ಟ ಹಿನ್ನೆಲೆಯಲ್ಲಿ ಭೂಮಿಯಲ್ಲಿ ಹಾಕಲಾಗಿದ್ದ ನಾಟಿ ಪೈರು ಬಿಸಿಲಿನ ತಾಪಕ್ಕೆ ಒಣಗಲು ಆರಂಭಿಸಿದೆ. ಕಳೆದ ಕೆಲವು ದಿನಗಳಿಂದ ಒಂದೇ ಸಮನೆ ಬಿಸಿಲಿನ ಝಳ ಹೆಚ್ಚಾಗಿದ್ದು, ಭತ್ತದ ಗದ್ದೆಗಳು ನೀರಿಲ್ಲದೆ ಒಣಗುತ್ತಿದೆ. ಬಿಸಿಲಿನ ತಾಪಕ್ಕೆ ಹಾಕಲಾಗಿರುವ ಭತ್ತದ ನಾಟಿ ಪೈರು ಉಳಿಯುವುದು ಕಷ್ಟವಾಗಿದೆ. ಇದರಿಂದ ಮತ್ತೆ ಈ ನಾಡಿನ ರೈತ ಸಂಕಷ್ಟದಲ್ಲಿ ಸಿಲುಕಿ ಅಪಾರ ಪ್ರಮಾಣದಲ್ಲಿ ನಷ್ಟ ಅನುಭವಿಸುವಂತಾಗಿದೆ. ಕೆಲವು ಭಾಗದ ರೈತರು, ತಮ್ಮ ಭತ್ತದ ಗದ್ದೆಗಳಿಗೆ ಲಭ್ಯವಿರುವ ನೀರನ್ನು ಕೆರೆಗಳಿಂದ ನೀರು ಹಾಯಿಸಿ, ಭತ್ತದ ಬೆಳೆಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಆದರೂ ಬಿಸಿಲಿನ ತಾಪಕ್ಕೆ ಕೆರೆಯ ನೀರು ಕೂಡ ಖಾಲಿಯಾಗುತ್ತಿದೆ. ಭತ್ತದ ಗದ್ದೆಗಳನ್ನೆ ನಂಬಿರುವ ದ.ಕೊಡಗಿನ ಕಿರುಗೂರು ಸುತ್ತಮುತ್ತಲಿನ ಅನೇಕ ಸಣ್ಣ ರೈತರಿಗೆ ಇದರಿಂದಾಗಿ ಅಪಾರ ನಷ್ಟ ಎದುರಾಗಿದೆ.

ಭತ್ತದ ಭೂಮಿಯನ್ನು ಪಾಳು ಬಿಡಬಾರದು ಎಂಬ ನಿಟ್ಟಿನಲ್ಲಿ ಸಾಲ ಮಾಡಿ ಭೂಮಿಗೆ ರಸಗೊಬ್ಬರ ಬಳಸಿ, ಬಿತ್ತನೆ ಮಾಡಿದ ರೈತ ಇದೀಗ ಮಳೆರಾಯನ ಮುನಿಸಿನಿಂದಾಗಿ ರೈತ ಮಳೆಗಾಗಿ ಆಕಾಶ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಭತ್ತ ಬೆಳೆಯುವ ಕನಸು ಹೊತ್ತ ಅನ್ನದಾತ ಇತ್ತ ಮಾಡಿದ ಸಾಲವನ್ನು ತೀರಿಸಲಾಗದ ಪರಿಸ್ಥಿತಿಗೆ ಬಂದು ತಲುಪುವಂತಾಗಿದೆ.

- ಹೆಚ್.ಕೆ. ಜಗದೀಶ್