ನಾಪೋಕ್ಲು, ಆ. ೩೦: ಕ್ಷೇತ್ರದ ಪ್ರತಿಯೊಬ್ಬ ಪ್ರಜೆಗೆ ನ್ಯಾಯ ಒದಗಿಸುವುದು ಹಾಗೂ ಕಟ್ಟ ಕಡೆಯ ವ್ಯಕ್ತಿಗೆ ಸೌಲಭ್ಯ ಒದಗಿಸುವುದು ತಮ್ಮ ಕರ್ತವ್ಯ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ ಅಭಿಮತ ವ್ಯಕ್ತಪಡಿಸಿದರು.

ಸಮೀಪದ ಚೇರಂಬಾಣೆ ಬೇಂಗ್‌ನಾಡ್ ಕೊಡವ ಸಮಾಜದ ವತಿಯಿಂದ ಭಾನುವಾರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ತಾವು ಶಾಸಕರಾಗಿರುವುದರಿಂದ ಪ್ರತಿಯೊಂದು ಸಮುದಾಯ, ಪ್ರತಿಯೊಂದು ಜನಾಂಗದ ಜನರ ಸಮಸ್ಯೆಗಳನ್ನು ಬಗೆಹರಿಸುವ ಹೊಣೆಗಾರಿಕೆ ತಮ್ಮ ಮೇಲಿದ್ದು ತಾವು ಅದನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ ಎಂದು ಹೇಳಿದರು. ಈಗಾಗಲೇ ಕೊಡಗು ದಶಕಗಳ ಕಾಲದಿಂದ ಅನುಭವಿಸುತ್ತಿರುವ ಕಂದಾಯ ಇಲಾಖೆಗೆ ಸಂಬAಧಿಸಿದ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳ ಮಟ್ಟದಲ್ಲಿ ಉನ್ನತ ಮಟ್ಟದ ಚರ್ಚೆ ನಡೆಸಲಾಗಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಸಮಾಜದ ಅಧ್ಯಕ್ಷರಾದ ಬಾಚರಣಿಯಂಡ ದಿನೇಶ್ ಅವರು ಎ.ಎಸ್. ಪೊನ್ನಣ್ಣ ನವರು ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ನಾಯಕರಾಗಿದ್ದು ಅವರಿಂದ ಕ್ಷೇತ್ರದ ಜನತೆಗೆ ಒಳ್ಳೆಯದು ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮತ್ತೋರ್ವ ಸನ್ಮಾನಿತೆ ಪದ್ಮಶ್ರೀ ಐಮುಡಿಯಂಡ ರಾಣಿ ಮಾಚಯ್ಯ ಅವರು ಮಾತನಾಡಿ, ಎ.ಎಸ್. ಪೊನ್ನಣ್ಣ ಅವರ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾಜ ಉಪಾಧ್ಯಕ್ಷರಾದ ಕೇಕಡ ರೋಮಿ, ಸ್ಥಳ ದಾನಿಗಳಾದ ಪಟ್ಟಮಾಡ ಅಕ್ಕವ್ವ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷರಾದ ತೆನ್ನಿರ ಮೈನಾ, ನಿರ್ದೇಶಕರಾದ ನಾಟೋಳಂಡ ಕುಶಾಲಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಿಲನ್ ಮುತ್ತಣ್ಣ, ಉಪಾಧ್ಯಕ್ಷರಾದ ಬಡ್ಡೀರ ಸೋಮಣ್ಣ ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದರು.

ವರ್ಣಿಕ ಪೊನ್ನಮ್ಮ ಪ್ರಾರ್ಥಿಸಿ, ಕೇಕಡ ರೋಮಿ ಸ್ವಾಗತಿಸಿ, ಬಡ್ಡಿರ ನಳಿನಿ ಕಾರ್ಯಕ್ರಮ ನಿರೂಪಿಸಿ, ತೇಲಪಂಡ ಲಕ್ಷಿ ವಂದಿಸಿದರು.