ಮಡಿಕೇರಿ, ಆ. ೩೦: ಚಿನ್ನಾಭರಣ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ. ದೇವಾನು-ದೇವತೆಗಳಿಂದ ಹಿಡಿದು, ರಾಜ-ಮಹಾರಾಜರು-ರಕ್ಕಸಾದಿ ಎಲ್ಲರೂ ಆಭರಣ ಶೋಡಷರಾಗಿದ್ದುದನ್ನು ಪುರಾಣಗಳಲ್ಲಿ ಉಲ್ಲೇಖವಾಗಿರುವುದನ್ನು ಕೇಳಿ-ನೋಡಿ ತಿಳಿದಿದ್ದೇವೆ.
ಕಲಿಯುಗದಲ್ಲಂತೂ ಎಲ್ಲರಿಗೂ ಆಭರಣವೆಂದರೆ ಇಷ್ಟವೇ, ಅದರಲ್ಲೂ ಮಹಿಳೆಯರಿಗೆ ಪಂಚಪ್ರಾಣ. ಚಿನ್ನಾಭರಣದೊಂದಿಗೆ ಸದಾ ಅಲಂಕಾರ ಭೂಷಿತಳಾಗಿ ಇರಬೇಕೆಂದು ಬಯಸುವ ಆಸೆಯ ಗುಣವುಳ್ಳ ಮನಸ್ಸು ಅವರದ್ದು.
ಚಿನ್ನ ಸಿಕ್ಕಿತೆಂದರೆ ಖುಷಿಯೋ ಖುಷಿ. ಕೆಲವರಂತೂ ಚಿನ್ನಾಭರಣ ಕಳವು ಮಾಡಿ ಶೋಕಿ ಮಾಡುವವರೂ ಇದ್ದಾರೆ. ಅಂತಹದರಲ್ಲಿ ಬಿದ್ದು ಸಿಕ್ಕರೆ ಬಿಡುತ್ತಾರೆಯೇ?
ಖಂಡಿತಾ ಬಿಡಲ್ಲ. ಆದರಿಲ್ಲಿ ಚಿನ್ನ ಬಿದ್ದು ಸಿಕ್ಕರೂ ಹೊನ್ನಿನಂತ ಮನಸಿರುವ ಹೆಣ್ಣು ಮಗಳೊಬ್ಬಳು ತನಗೆ ಸಿಕ್ಕ ಚಿನ್ನವನ್ನು ಅದರ ಬೆಲೆ ಎಷ್ಟಿರಬಹುದು? ಕಳೆದುಕೊಂಡವರು ಎಷ್ಟು ಕಷ್ಟಪಡುತ್ತಿರಬಹುದೆಂದು ಅರಿತು ಅದನ್ನು ಕಳೆದುಕೊಂಡವರಿಗೆ ತಲುಪಿಸುವ ಮನಸು ಮಾಡಿದ್ದಾರೆ.
ಹೇಗೆ ತಲಪಿಸುವುದೆಂದು ಚಿಂತಿಸುತ್ತಿದ್ದವರಿಗೆ ನೆನಪಿಗೆ ಬಂದಿದ್ದು ‘ಶಕ್ತಿ’ ಪತ್ರಿಕೆ. ಇತ್ತ ಚಿನ್ನ ಕಳೆದುಕೊಂಡವರು ಕೂಡ ಚಿನ್ನದ ಹುಡುಕಾಟದಲ್ಲಿ ಬಸವಳಿದು. ಕೊನೆಗೆ ಯಾರಾದರೂ ಸಿಕ್ಕಿದವರು ತಲುಪಿಸಿಕೊಡಿ ಎಂದು ಕೋರಿಕೆ ಸಲ್ಲಿಸಿದ್ದೂ ‘ಶಕ್ತಿ’ ಪತ್ರಿಕೆಗೆ. ಕೊನೆಗೂ ತನಗೆ ಸಿಕ್ಕ ಚಿನ್ನವನ್ನು ವಾರಸುದಾರರಿಗೆ ತಲುಪಿಸಿರುವ ಹೆಣ್ಣುಮಗಳು ಸ್ತಿçÃಕುಲಕ್ಕೆ ಮಾದರಿಯಾಗಿದ್ದಾಳೆ.
ಮಡಿಕೇರಿ ನಗರದ ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿ ಪ್ರೀತಿ ಘಾಟಗೆ ಚಿನ್ನದ ಸರ ಹಿಂತಿರುಗಿಸಿದವರು. ತಾ. ೨೯ ರಂದು ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ರೌಂಡ್ಸ್ನಲ್ಲಿರುವ ವೇಳೆಯಲ್ಲಿ ಚಿನ್ನದ ಬ್ರೇಸ್‌ಲೆಟ್ ಪ್ರೀತಿಗೆ ಸಿಕ್ಕಿದೆ. ಈ ಸಂದರ್ಭ ಬಸ್ ಚಾಲಕರು ಡಿಪೋಗೆ ನೀಡಿ ಅದನ್ನು ತಲುಪಿಸುವ ಕೆಲಸ ಮಾಡುತ್ತೇವೆ ಎಂದಿದ್ದಾರೆ. ಈ ಸಂದರ್ಭ ಪ್ರೀತಿ ತಾನು ಪೊಲೀಸ್ ಠಾಣೆಗೆ ನೀಡಿ ಪ್ರಚಾರಪಡಿಸಿ ಕಳೆದುಕೊಂಡವರಿಗೆ ನೀಡುತ್ತೇನೆ ಎಂದು ಹೇಳಿ ಠಾಣೆಗೆ ಆಭರಣವನ್ನು ತಂದಿದ್ದಾರೆ.
ಕೆಲಸದ ಒತ್ತಡವಿದ್ದ ಹಿನ್ನೆಲೆ ರಾತ್ರಿ ೯.೫೪ಕ್ಕೆ ‘ಶಕ್ತಿ’ಗೆ ಉಚಿತ ಜಾಹೀರಾತು ನೀಡಲು ಸಂಪರ್ಕಿಸಿದ್ದಾರೆ.
(ಮೊದಲ ಪುಟದಿಂದ) ಅಂದೆ ರಾತ್ರಿ ೯.೫೬ಕ್ಕೆ ಬ್ರೇಸ್‌ಲೇಟ್ ಕಳೆದುಕೊಂಡ ಸೋಮವಾರಪೇಟೆಯ ಪತ್ರಕರ್ತ ತೇಲಪಂಡ ಕವನ್ ಕಾರ್ಯಪ್ಪ ಸೋಮವಾರಪೇಟೆಯ ವರದಿಗಾರರ ಮೂಲಕ ‘ಶಕ್ತಿ’ಯನ್ನು ಸಂಪರ್ಕಿಸಿ ತನ್ನ ‘ಬ್ರೇಸ್‌ಲೇಟ್’ ಕಳೆದುಹೋಗಿರುವ ಕುರಿತು ಉಚಿತ ಜಾಹೀರಾತು ನೀಡಬೇಕೆಂದು ಕರೆ ಮಾಡಿಸಿದ್ದಾರೆ.
೨ ವಿಷಯಗಳು ತಾಳೆ ಹೊಂದಿದ ಹಿನ್ನೆಲೆ ಆಭರಣದ ಕುರಿತು ಖಚಿತಪಡಿಸಿ ಪೂರಕ ದಾಖಲೆಯನ್ನು ಪರಿಶೀಲಿಸಿದಾಗ ಕಳೆದುಕೊಂಡ ಕುರಿತು ಸ್ಪಷ್ಟತೆ ದೊರೆತಿದೆ. ಇಂದು ನಗರ ಠಾಣೆಗೆ ಆಗಮಿಸಿದ ಕವನ್ ಆಭರಣವನ್ನು ಪಡೆದುಕೊಂಡಿದ್ದಾರೆ. ತಾನು ಬೆಳಿಗ್ಗೆ ಆಕಾಶವಾಣಿಯಲ್ಲಿ ಉದ್ಘೋಷಕನಾಗಿ ಕೆಲಸಕ್ಕೆ ಬರುವ ಸಂದರ್ಭ ಬಸ್ಸಿನಲ್ಲಿ ಬ್ರೆಸ್‌ಲೇಟ್ ಬಿದ್ದುಹೋಗಿದೆ. ಕೆಲಸ ಮುಗಿಸಿ, ಬಸ್ಸಿನಲ್ಲಿ ಮರಳಿ ಕುಶಾಲನಗರ ಮಾರ್ಗವಾಗಿ ಸೋಮವಾರಪೇಟೆಗೆ ತೆರಳುವ ಸಂದರ್ಭ ಗುಡ್ಡೆಹೊಸೂರಿನಲ್ಲಿ ಆಭರಣ ಇಲ್ಲದಿರುವುದು ಮನಗಂಡಿದೆ. ತಕ್ಷಣ ಬಸ್ ನಿಲ್ಲಿಸಿ ಹುಡುಕಾಟ ನಡೆಸಿದ್ದೆ. ಆದರೆ, ಪತ್ತೆಯಾಗಿರಲಿಲ್ಲ. ರಾತ್ರಿ ‘ಶಕ್ತಿ’ಗೆ ಉಚಿತ ಜಾಹೀರಾತು ನೀಡಬೇಕೆಂದು ಕರೆ ಮಾಡಿದ ಸಂದರ್ಭ ಆಭರಣ ಪೊಲೀಸರ ವಶದಲ್ಲಿರುವುದು ತಿಳಿದು ಬಂದಿದೆ ಎಂದು ಹೇಳಿದ್ದಾರೆ. ರೂ. ೧ ಲಕ್ಷ ಬೆಲೆಬಾಳುವ ಚಿನ್ನದ ಆಭರಣವನ್ನು ಹಿಂತಿರುಗಿಸಿರುವ ಪ್ರೀತಿ ಘಾಟ ಕಾರ್ಯಕ್ಕೆ ಪೊಲೀಸ್ ಉನ್ನತಾಧಿಕಾರಿಗಳು, ಸಿಬ್ಬಂದಿಗಳು ಮೆಚ್ಚುಗೆ ವ್ಯಕ್ತಪಡಿಸಿ ಶ್ಲಾಘಿಸಿದ್ದಾರೆ.