ಮುಳ್ಳೂರು, ಆ. ೩೦: ೧೨ನೇ ಶತಮಾನದಲ್ಲಿ ಬಸವಣ್ಣನವರು ಜಾತಿ ಭೇದವನ್ನು ಹೋರಾಟದ ಮೂಲಕ ಹೋಗಲಾಡಿಸಿದ್ದರು ಎಂದು ಶರಣ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಮತ್ತು ಹಿರಿಯ ಪತ್ರಕರ್ತ ಎಸ್. ಮಹೇಶ್ ಅಭಿಪ್ರಾಯಪಟ್ಟರು.

ಅವರು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಸೋಮವಾರಪೇಟೆ ಕಸಾಪ ಮತ್ತು ಕೊಡ್ಲಿಪೇಟೆ ಹೋಬಳಿ ಕಸಾಪ ಹಾಗೂ ಕೊಡ್ಲಿಪೇಟೆ ಹಲಸಿನಮರ ಗೌರಮ್ಮ ಶಾಂತಮಲ್ಲಪ್ಪ ಪ್ರಥಮ ದರ್ಜೆ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಆರೋಢ ದಾಸೋಹಿ ಧರ್ಮ ಚಿಂತಾಮಣಿ ಮಹಾಶರಣ ಲಿಂ| ಮಾಗನೂರು ಬಸಪ್ಪ ದತ್ತಿ ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಕುರಿತು ಉಪನ್ಯಾಸ ನೀಡುತ್ತಿದ್ದರು. ಬಸವಣ್ಣನವರು ೧೨ನೇ ಶತಮಾನದಲ್ಲಿದ್ದ ಜಾತಿ ಭೇದವನ್ನು ಹೋರಾಟದ ಮೂಲಕ ಹೋಗಲಾಡಿಸಿದ್ದರೂ ಈಗಲೂ ಜಾತಿ ಭೇದ ಎಂಬ ಸಾಮಾಜಿಕ ಪಿಡುಗು ಇದೆ. ಬಸವಣ್ಣನವರು ಅಂದಿನ ಕಾಲದಲ್ಲೆ ಅನುಭವ ಮಂಟಪ ಸ್ಥಾಪನೆ ಮಾಡುವ ಮೂಲಕ ಇಂದಿನ ಕಾಲಕ್ಕೆ ಮಾದರಿಯಾಗಿದ್ದಾರೆ ಎಂದರು. ಬಸವಣ್ಣನವರ ಸಾಮಾಜಿಕ ಚಂತನೆ, ಶರಣರ ಚಿಂತನೆಯನ್ನು ಇಂದಿನ ಯುವ ಜನಾಂಗದವರು ಅನುಸರಿಸ ಬೇಕು. ಶರಣ ಸಾಹಿತ್ಯ ಮತ್ತು ಶರಣರ ಕೊಡುಗೆ ಬಗ್ಗೆ ಅರಿತುಕೊಳ್ಳುವ ಅಗತ್ಯ ಇದೆ ಎಂದರು. ಕಿರಿಕೊಡ್ಲಿ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ-ಭಾಷೆಗಳಲ್ಲಿ ವೈವಿದ್ಯತೆ ಇದೆ, ಅದರಲ್ಲಿ ಕನ್ನಡ ಮಹತ್ವವನ್ನು ಎತ್ತಿ ಹಿಡಿಯುವ ಮೂಲಕ ಜನರಲ್ಲಿ ಭರವಸೆ ಮೂಡಿಸಬೇಕೆಂದರು. ವಿದ್ಯಾರ್ಥಿಗಳಲ್ಲಿ ಕನ್ನಡ ಸಾಹಿತ್ಯ ಆಸಕ್ತಿ ಇರಬೇಕು, ಯುವ ಸಾಹಿತ್ಯಗಳು ಜ್ಞಾನಪೀಠ ಪ್ರಶಸ್ತಿ ಪಡೆದುಕೊಳ್ಳಲು ಹೊರಹೊಮ್ಮಬೇಕು ಎಂದ ಅವರು ಕನ್ನಡ ಭಾಷೆ ಸಾಹಿತ್ಯದಲ್ಲಿ ಆತ್ಮೀಯ ಅಭಿಮಾನ ಇಟ್ಟುಕೊಂಡರೆ ಕನ್ನಡ ಭಾಷೆ ಬೆಳೆಯುತ್ತದೆ , ನಮ್ಮ ಸುತ್ತಮುತ್ತಲಿನ ಭಾಷೆ, ಸಂಸ್ಕೃತಿ, ಧಾರ್ಮಿಕ ಚಿಂತನೆಯುಳ್ಳ ಪುಸ್ತಕಗಳನ್ನು ಓದುವ ಹವ್ಯಾಸಗಳನ್ನು ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಎಂ.ಆರ್.ನಿರAಜನ್ ಮಾತನಾಡಿ, ಸಾಹಿತ್ಯ, ಸಂಸ್ಕೃತಿ ಬೆಳವಣಿಗೆಗೆ ಕನ್ನಡ ಸಾಹಿತ್ಯ ಪರಿಷತ್ತ್ ಗಳ ಕಾರ್ಯವು ಕಾರಣವಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರು ಸಾಹಿತ್ಯ ಲೋಕಕ್ಕೆ ನೀಡಿರುವ ಕೊಡಗೆ ಅಪಾರ, ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದ್ದು ಪ್ರಪಂಚದ ಐದು ಶ್ರೇಷ್ಠ ಭಾಷೆಗಳಲ್ಲಿ ಕನ್ನಡ ಭಾಷೆ ಒಂದಾಗಿರುವುದು ಕನ್ನಡಿಗರ ಹೆಮ್ಮೆಯ ವಿಷಯವಾಗಿದೆ ಎಂದರು.

ಸೋಮವಾರಪೇಟೆ ತಾಲೂಕು ಕಸಾಪ ಅಧ್ಯಕ್ಷ ಎಸ್.ಡಿ. ವಿಜೇತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೊಡ್ಲಿಪೇಟೆ ಹೋಬಳಿ ಕಸಾಪ ಮಾಜಿ ಅಧ್ಯಕ್ಷ ಅಬ್ದುಲ್ ರಬ್, ಕಸಾಪ ಸದಸ್ಯ ಜಯರಾಜ್ ಪ್ರಮುಖರಾದ ಶಾಂತಮಲ್ಲಪ್ಪ ಮುಂತಾದವರಿದ್ದರು.