ಶನಿವಾರಸಂತೆ, ಆ. ೩೧: ನಾವು ಕನ್ನಡಿಗರೆಂಬ ಹೆಮ್ಮೆ ನಮಗಿದ್ದು ಆತ್ಮೀಯತೆ ಹಾಗೂ ಅಭಿಮಾನದಿಂದ ಕನ್ನಡವನ್ನು ಉಳಿಸಿ- ಬೆಳೆಸಬೇಕು ಎಂದು ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಕೊಡಗು ಜಿಲ್ಲಾ ಘಟಕ, ಸೋಮವಾರಪೇಟೆ ತಾಲೂಕು ಘಟಕ, ಕೊಡ್ಲಿಪೇಟೆ ಹೋಬಳಿ ಘಟಕ ಹಾಗೂ ಹಲಸಿನಮರ ಗೌರಮ್ಮ-ಶಾಂತಮಲ್ಲಪ್ಪ ಪ್ರಥಮ ದರ್ಜೆ ಕಾಲೇಜಿನ ಸಹಭಾಗಿತ್ವದಲ್ಲಿ ಅರೋಢ ದಾಸೋಹಿ ಧರ್ಮ ಚಿಂತಾಮಣಿ ಮಹಾಶರಣ ಮಾಗನೂರು ಬಸಪ್ಪ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಭಾಷೆ, ಸಂಸ್ಕೃತಿ, ನೆಲ, ಜಲ, ಉಳಿಸಲು ಇಂದು ಸಂಘಟನೆ ಮೂಲಕ ಹೋರಾಟ ಮಾಡುವ ಪರಿಸ್ಥಿತಿ ಇದೆ ಕನ್ನಡ ಮನಸ್ಸುಗಳು ಶ್ರದ್ಧೆಯಿಂದ ಸಾಹಿತ್ಯ ಬೆಳೆಸಬೇಕು. ಸಾಹಿತ್ಯಾಭಿಮಾನಿಯಾಗಲು ದಿನನಿತ್ಯ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇಂದಿನ ಕಾಲ ವೈಜ್ಞಾನಿಕವಾಗಿ ಪ್ರಗತಿ ಹೊಂದುತ್ತಿದ್ದು ಪ್ರಪಂಚವೇ ನಮ್ಮ ಕರ್ನಾಟಕದ ಕಡೆ ತಿರುಗಿ ನೋಡುವಂತೆ ನಮ್ಮ ವಿಜ್ಞಾನಿಗಳು ಚಂದ್ರಯಾನ-೩ ಯೋಜನೆ ಸಾಧನೆ ಮಾಡಿದ್ದಾರೆ. ಇದು ಪ್ರತಿ ಕನ್ನಡಿಗ ಹೆಮ್ಮೆ ಪಡುವ ವಿಚಾರ ಎಂದರು.
ಶರಣ ಸಂಸ್ಕೃತಿಯ ಕುರಿತು ಪತ್ರಕರ್ತ ಎಸ್.ಮಹೇಶ್ ಉಪನ್ಯಾಸ ನೀಡಿದರು. ಕಸಾಪ ತಾಲೂಕು ಘಟಕದ ಅಧ್ಯಕ್ಷ ಎಸ್.ಡಿ. ವಿಜೇತ್ ಮಾತನಾಡಿದರು. ಹೋಬಳಿ ವ್ಯಾಪ್ತಿಯಲ್ಲಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ಶೇ. ೧೦೦ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಕೊಡ್ಲಿಪೇಟೆ ಹೋಬಳಿ ಘಟಕದ ಅಧ್ಯಕ್ಷ ಶಾಂತಮಲ್ಲಪ್ಪ ವಹಿಸಿದ್ದರು. ನಿರ್ದೇಶಕರಾದ ಅಬ್ದುಲ್ ರಬ್, ಟಿ.ಎನ್. ಶಿವಕುಮಾರ್, ಜಯರಾಜ್, ಯತೀಶ್ ಇತರರು ಉಪಸ್ಥಿತರಿದ್ದರು