ವೀರಾಜಪೇಟೆ, ಆ. ೨೯: ಇಂದಿನ ಸಮಾಜದಲ್ಲಿ ಮಹಿಳೆಯರು ಮುಖ್ಯ ವಾಹಿನಿಗೆ ಬರುವುದರ ಮೂಲಕ ತಮ್ಮ ಶಕ್ತಿಯನ್ನು ಗುರುತಿಸಿಕೊಂಡು ಸಮಾಜದಲ್ಲಿ ಉನ್ನತ ಸ್ಥಾನಮಾನ ಗಳನ್ನು ಹೊಂದಬೇಕು ಎಂದು ಎ.ಕೆ.ಸುಬ್ಬಯ್ಯ-ಪೊನ್ನಮ್ಮ ಶೈಕ್ಷಣಿಕ ಮತ್ತು ದತ್ತಿ ಟ್ರಸ್ಟ್ನ ಮ್ಯಾನೆಜಿಂಗ್ ಟ್ರಸ್ಟಿ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಅಭಿಪ್ರಾಯಪಟ್ಟರು.
ಎ.ಕೆ.ಸುಬ್ಬಯ್ಯ ಪೊನ್ನಮ್ಮ ಶೈಕ್ಷಣಿಕ ಮತ್ತು ದತ್ತಿ ಟ್ರಸ್ಟ್ ವತಿಯಿಂದ ಶಕ್ತಿ ದಿನಪತ್ರಿಕೆಯ ಸಹಯೋಗದೊಂದಿಗೆ ಸೋಮವಾರ ವೀರಾಜಪೇಟೆ ಯಲ್ಲಿರುವ ಶಾಸಕರ ನಿವಾಸದಲ್ಲಿ ನಡೆದ ಪದವಿ ಮೊದಲ ವರ್ಷಕ್ಕೆ ಸೇರ್ಪಡೆಯಾದ ಹಾಗೂ ದ್ವಿತೀಯ, ತೃತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ, ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಎ.ಎಸ್. ಪೊನ್ನಣ್ಣ ಅವರು, ಇಲ್ಲಿ ವಿದ್ಯಾರ್ಥಿಗಳೇ ಕೇಂದ್ರ ಬಿಂದು, ಈ ಕಾರ್ಯಕ್ರಮವನ್ನು ಹೆಣ್ಣು ಮಕ್ಕಳ ಭವಿಷ್ಯ ರೂಪಿಸುವ ಸಲುವಾಗಿ, ತಂದೆ ತಾಯಿಯರ ಜ್ಞಾಪಕಾರ್ಥವಾಗಿ ಸಹೋದರರು ಸೇರಿ ಸಮಾಜಕ್ಕೆ ಏನಾದರೊಂದು ಕೊಡುಗೆ ನೀಡುವ ಉದ್ದೇಶದಿಂದ ಪ್ರಾರಂಭಿಸಲಾಗಿದೆ ಎಂದರು.
ಹೆಣ್ಣು ಮಕ್ಕಳು ಸಮಾಜದ ಮುಖ್ಯವಾಹಿನಿಗೆ ಬರುವಂತಾಗಬೇಕು, ಮಹಿಳೆಯರಿಗೆ ಸಮಾಜದಲ್ಲಿ ಸಾಕಷ್ಟು ಅಡೆತಡೆಗಳಿವೆ, ಎಲ್ಲವನ್ನೂ ಮೆಟ್ಟಿನಿಂತು ದಿಟ್ಟಮಹಿಳೆಯಾಗಿ ಹೊರಹೊಮ್ಮಬೇಕು. ಮಹಿಳೆಯರ ವಿದ್ಯಾಭ್ಯಾಸ ಕೇವಲ ಪುಸ್ತಕಕ್ಕೆ ಸೀಮಿತವಾಗದೆ ಸಮಾಜದಲ್ಲಿ ಎತ್ತರಕ್ಕೆ ಬೆಳೆಯುವಂತಾಗಬೇಕು. ಮಹಿಳೆಯರು ಸಮಾಜ ಹಾಗೂ ಕುಟುಂಬದ ಎಲ್ಲ ಸ್ತರಗಳಲ್ಲಿ ತನ್ನ ಕಾರ್ಯಕ್ಷಮತೆ ಹಾಗೂ ಬದ್ಧತೆ ಪ್ರದರ್ಶಿಸಿದ್ದಾಳೆ. ಮಹಿಳೆ ತನ್ನ ಕಾರ್ಯಗಳನ್ನು ೩ಐದನೇ ಪುಟಕ್ಕೆ
(ಮೊದಲ ಪುಟದಿಂದ) ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನೆರವೇರಿಸುತ್ತಾಳೆ. ಮಹಿಳೆಯರು ಕೀಳರಿಮೆ ಬಿಟ್ಟು ಹೊರಬರಬೇಕು ಎಂದರು.
ನಮ್ಮ ದೇಶದಲ್ಲಿ ಇಂದಿರಾಗಾAದಿ, ಜಯಲಲಿತಾ, ಮಮತಾ ಬ್ಯಾನರ್ಜಿಯವರಂತಹ ಮಹಿಳೆಯರು ತಮ್ಮದೇ ಆದ ಛಾಪನ್ನು ಮೂಡಿಸಿ ದೇಶದಲ್ಲಿ ಉನ್ನತಮಟ್ಟಕ್ಕೇರಿದ್ದಾರೆ. ಹಾಗೆಯೇ ವಿದ್ಯಾರ್ಥಿಗಳಿಗೆ ಸಾಧಿಸುವ ಹಂಬಲ, ಛಲ, ಗುರಿಯಿರಬೇಕು. ಜೀವನದ ರೂಪುರೇಷೆಗಳನ್ನು ದಿಕ್ಕುಗಳನ್ನು ಗುರುತಿಸುವ ಶಕ್ತಿ ಇದ್ದು, ಛಾಪನ್ನು ಮೂಡಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
೨೦೨೦ರಲ್ಲಿ ಕೊರೊನಾ ಮಹಾಮಾರಿ ಸಂದರ್ಭದಲ್ಲಿ ಮೊದಲ ಬಾರಿಗೆ ತಂದೆ ತಾಯಿ ಹೆಸರಿನಲ್ಲಿ ದತ್ತಿ ಸ್ಥಾಪಿಸಲಾಗಿದ್ದು, ತಾಯಿ ಪೊನ್ನಮ್ಮ ಅವರಿಗೆ ಹೆಣ್ಣು ಮಕ್ಕಳು ಎಂದರೆ ಬಹಳ ಅಚ್ಚುಮೆಚ್ಚು. ಹಾಗಾಗಿಯೇ ಈ ಕಾರ್ಯಕ್ರಮದ ಮೂಲಕ ಹೆಣ್ಣುಮಕ್ಕಳಿಗೆ ಪ್ರೋತ್ಸಾಹ ನೀಡಲು ಈ ವಿದ್ಯಾರ್ಥಿವೇತನ ನೀಡಲಾಗುತ್ತಿದೆ ಎಂದರು. ಆರ್ಥಿಕವಾಗಿ ಹಿಂದುಳಿದಿದ್ದು ಉನ್ನತ ಶ್ರೇಣಿಯಲ್ಲಿ ಉತ್ತಿರ್ಣರಾದ ವಿದ್ಯಾರ್ಥಿಗಳನ್ನು ಪಾರದರ್ಶಕವಾಗಿ ಗುರುತಿಸಬೇಕು, ಎನ್ನುವ ಚಿಂತನೆಯಿAದ ಶಕ್ತಿ ದಿನಪತ್ರಿಕೆ ಮುಖಾಂತರ ವಿದ್ಯಾರ್ಥಿಗಳನ್ನು ಗುರುತಿಸುವ ಕಾರ್ಯವಾಗಿದೆ. ನಮ್ಮ ಜಿಲ್ಲೆಯಲ್ಲಿ ಸಾಕಷ್ಟು ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ. ಅವರನ್ನು ಮುಂದಕ್ಕೆ ತರಲು ಈ ರೀತಿಯ ದತ್ತಿ ಕಾರ್ಯಕ್ರಮಗಳು ಸಹಕಾರಿಯಾಗಲಿವೆ ಎಂದರು.
ಶಕ್ತಿ ದಿನಪತ್ರಿಕೆಯ ಸಂಪಾದಕ ಜಿ.ಚಿದ್ವಿಲಾಸ್ ಅವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ ಜನಪರ ಸೇವೆ, ಜನಪರ ಕಾಳಜಿ ನನ್ನ ಜೀವನದ ಅವಿಭಾಜ್ಯ ಅಂಗ, ರಾಜಕೀಯ ರಹಿತವಾಗಿ ಈ ಕಾರ್ಯಕ್ರಮ ಆಗಬೇಕು ಎನ್ನುವುದು ಈ ಕಾರ್ಯಕ್ರಮದ ಉದ್ದೇಶ ಎಂದು ಶಾಸಕ ಪೊನ್ನಣ್ಣ ಅವರು ತಮ್ಮ ಇಂಗಿತ ವ್ಯಕ್ತಪಡಿಸಿದ್ದರು. ಇಲ್ಲಿ ಪಾರದರ್ಶಕತೆ ಇರಬೇಕು, ಯಾರ ಒತ್ತಡ ಇರಬಾರದು, ನಾವು ಮಾಡಿದ ಕಾರ್ಯ ಸಫಲವಾಗಬೇಕು, ಅದಕ್ಕೆ ಪ್ರತಿಫಲವಾಗಿ ಉತ್ತಮ ಫಲಿತಾಂಶ ದೊರಕಬೇಕು, ಇಲ್ಲಿ ವಿದ್ಯಾರ್ಥಿವೇತನ ಪಡೆದುಕೊಂಡ ವಿದ್ಯಾರ್ಥಿಗಳು ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಗಳಿಸಿದ್ದಾರೆ ಎಂದರೆ ದಾನಿಗೆ ದೊಡ್ಡ ಸಮಾಧಾನ. ದಾನ ಮಾಡುವವರು ಬಯಸುವುದು ಕೇವಲ ಫಲಿತಾಂಶವನ್ನೇ ಹೊರತು ಪ್ರತಿಫಲವನ್ನಲ್ಲ ಎಂದರು.
ಶಕ್ತಿ ದಿನಪತ್ರಿಕೆಯ ಸಹ ಸಂಪಾದಕ ಪ್ರಜ್ವಲ್ ಅವರು ಮಾತನಾಡಿ, ಒಂದು ವಾರದಲ್ಲಿ ಸುಮಾರು ೨೫೦ ಅರ್ಜಿಗಳು ಬಂದಿದ್ದವು. ಅದರಲ್ಲಿ ಈ ಬಾರಿ ೩೨ ಅರ್ಜಿಗಳನ್ನು ಆಯ್ಕೆ ಮಾಡಲಾಗಿದೆ. ಕಳೆದ ಎರಡು ವರ್ಷಗಳಿಂದ ವಿದ್ಯಾರ್ಥಿವೇತನ ಪಡೆಯುತ್ತಿದ್ದ ಒಟ್ಟು ವಿದ್ಯಾರ್ಥಿಗಳನ್ನು ಸೇರಿಸಿ ಈ ಬಾರಿ ೧೦೪ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ ಎಂದರು.
ಐಎಎಸ್ ಅಕಾಡೆಮಿ ಬೆಂಗಳೂರು ಇದರ ಸ್ಥಾಪಕ ಡಾ. ಅರ್ಜುನ್ ಬೋಪಣ್ಣ ಮಾತನಾಡಿ ಈ ರೀತಿಯ ಕಾರ್ಯಕ್ರಮದ ಮೂಲಕ ಸಾಮಾಜಿಕ ಕಳಕಳಿ ಹೊಂದಿರುವ ಪೊನ್ನಣ್ಣ ಅವರ ಸೇವೆ ಅನನ್ಯ. ವಿದ್ಯಾರ್ಥಿ ವೇತನ ನೀಡುವುದು ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿದೆ. ಹಾಗೆಯೇ ಮಹಿಳೆಯರು ಸಮಾಜದ ನಿರ್ಮಾತೃಗಳಾಗಿದ್ದು ಇವರ ಕೊಡುಗೆ ಬಹಳಷ್ಟಿದೆ. ಮಹಿಳಾ ಸಬಲೀಕರಣವಾಗಬೇಕು ಎಂದರಲ್ಲದೆ ಪ್ರತಿಯೊಬ್ಬ ವಿದ್ಯಾರ್ಥಿ ಸಾಧಿಸುವ ಛಲದೊಂದಿಗೆ ಇನ್ನಷ್ಟು ಜನರಿಗೆ ತಾವು ಮಾದರಿಯಾಗಿ ಅವರಿಗೂ ಸಹಾಯಹಸ್ತ ನೀಡುವ ಮನೋಭಾವನೆ ಹೊಂದಬೇಕು ಎಂದು ಕಿವಿಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಬಿದ್ದಾಟಂಡ ಸುಮನ್ ಪ್ರದೀಪ್ ಮಾತನಾಡಿ ಹೆಣ್ಣೊಂದು ಕಲಿತರೆ ತನ್ನ ಕುಟುಂಬವರ್ಗಕ್ಕೂ ಕಲಿಸುತ್ತಾರೆ. ಪ್ರತಿಯೊಬ್ಬರಿಗೂ ಒಂದೊAದು ಹವ್ಯಾಸ ಇರಬೇಕು, ಸಾಮಾನ್ಯ ಜ್ಞಾನ ಇರಬೇಕು. ಹೆಣ್ಣಿನ ನಿಜವಾದ ಜೀವನ ಪ್ರಾರಂಭವಾಗುವದೇ ಕಾಲೇಜು ಹಂತ ಮುಗಿದ ಮೇಲೆ ನಯ, ವಿನಯ, ಆಚಾರ ವಿಚಾರ ಪಾಲನೆ ಮಾಡುವುದರೊಂದಿಗೆ ಸಮಾಜದ ಮುಂಚೂಣಿ ಸ್ಥಾನವನ್ನು ಮಹಿಳೆಯರು ಅಲಂಕರಿಸಬೇಕು ಎಂದರು. ಹಲವು ವಿದ್ಯಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳಾಗಿದ್ದ ಮಾಚಿಮಂಡ ಗಂಗೆ ಸುಬ್ರಮಣಿ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ವಿದ್ಯಾರ್ಥಿಗಳು, ಪೋಷಕರು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜಾ ಉತ್ತಪ್ಪ, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ನಾಪೋಕ್ಲು ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್ ಸೇರಿದಂತೆ ಹಲವರು ಹಾಜರಿದ್ದರು. ಶಿಕ್ಷಕ ಎ.ವಿ ಮಂಜುನಾಥ್ ಸ್ವಾಗತಿಸಿ ನಿರೂಪಿಸಿದರೆ, ಅಜ್ಜಿಕುಟ್ಟೀರ ನರೇನ್ ಕಾರ್ಯಪ್ಪ ವಂದಿಸಿದರು.