ಮಡಿಕೇರಿ, ಆ. ೩೦: ಪ್ರವಾಸಿತಾಣವಾಗಿ ಗುರುತಿಸಿಕೊಂಡು ಅಪಾರ ಜನರನ್ನು ಸೆಳೆಯುತ್ತಿರುವ ಮಂಜಿನ ನಗರಿ ಮಡಿಕೇರಿಗೆ ಇದೀಗ ಹೊಸ ಅತಿಥಿಯೊಂದು ‘ಎಂಟ್ರಿ’ ಕೊಟ್ಟಿದೆ.

ಪ್ರವಾಸಿಗರು ತಂಡೋಪ ತಂಡವಾಗಿ ಬರುವುದು ಸಹಜ. ಇವರು ಮೊದಲೇ ಹೊಟೇಲ್, ಲಾಡ್ಜ್, ಹೋಂಸ್ಟೇ, ರೆಸಾರ್ಟ್ಗಳನ್ನು ಬುಕ್ಕಿಂಗ್ ಮಾಡಿ ಬರುತ್ತಾರೆ. ಆದರೆ ಇದೀಗ ಕೆಲ ದಿನಗಳಿಂದ ನಗರಕ್ಕೆ ಆಗಮಿಸಿರುವ ಈ ಹೊಸ ಅತಿಥಿಗೆ ಇಂತಹ ಯಾವುದೇ ತಲೆಬಿಸಿಯಿಲ್ಲ... ನೇರವಾಗಿ ವಿವಿಧ ಮನೆಗಳಿಗೆ, ಕಚೇರಿಗಳಿಗೆ, ಹೊಟೇಲ್ - ಲಾಡ್ಜ್ಗಳಿಗೆ ಎಂಟ್ರಿ ಕೊಡುತ್ತಿದ್ದಾನೆ. ಕೆಲವು ಮನೆಗಳ

(ಮೊದಲ ಪುಟದಿಂದ) ಅಡುಗೆ ಮನೆಯತ್ತಲೂ ಆಹ್ವಾನವಿಲ್ಲದೆ ಎಡಕುತ್ತಿರುವುದು ಕಂಡುಬರುತ್ತಿದ್ದು ಇದು ಜನರಲ್ಲಿ ಚರ್ಚೆಯ ವಿಷಯವಾಗಿದೆ.

ಅಂದ ಹಾಗೆ ಈ ಅತಿಥಿಯಾರೆಂಬ ಬಗ್ಗೆ ಹುಬ್ಬೇರಿಸಬೇಡಿ. ಇದೊಂದು ವಾನರ...! ಕೆಲ ದಿನಗಳಿಂದ ನಗರದೊಳಗೆ ಸೇರಿಕೊಂಡಿದ್ದು, ಅಲ್ಲಲ್ಲಿ ತಿರುಗಾಡುತ್ತಿದೆ. ಅಪರೂಪಕ್ಕೆ ಕಾಣುವ ಮಂದಿ ‘ತಿಂಡಿ’ಗಳನ್ನೂ ನೀಡಿ ಉಪಚರಿಸುತ್ತಿದ್ದಾರೆ. ಆದರೆ ಏಕಾಏಕಿ ಮನೆಯಲ್ಲಿ ಅಡುಗೆ ಮನೆ ಕಿಟಕಿಯಲ್ಲಿ ಬಾಯಿತೆರೆದು ಇಣುಕಿದ ಸಂದರ್ಭ ಹಲವು ಮಹಿಳೆಯರು ಭಯಭೀತರಾಗಿದ್ದಾರೆ. ಒಂದು ರೀತಿಯಲ್ಲಿ ಪಾಪದ ಪ್ರಾಣಿ ಎಂಬ ಕನಿಕರ ಜನತೆಯಲ್ಲಿದ್ದರೂ ದಾಳಿ ನಡೆಸಿದರೆ ಏನು ಗತಿ ಎಂಬ ಭಯವೂ ಆವರಿಸುತ್ತಿರುವುದಾಗಿ ಹಲವರು ಹೇಳುತ್ತಿದ್ದಾರೆ. ಈ ವಾನರ ಒಂಟಿಯಾಗಿ ತಿರುಗಾಡುತ್ತಿದ್ದು ಇದರ ದೇಹದಲ್ಲಿ ಗಾಯದ ಲಕ್ಷಣ ಕಂಡು ಬಂದಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅರಣ್ಯ ಇಲಾಖೆಯವರು ಇದನ್ನು ಹಿಡಿದು ಅಗತ್ಯ ಶುಶ್ರೂಷೆ ನೀಡುವ ಮೂಲಕ ಮತ್ತೆ ಅರಣ್ಯಕ್ಕೆ ಸೇರಿಸಬೇಕು ಎಂದು ಜನರು ಇದೀಗ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

-ಶಶಿ ಸೋಮಯ್ಯ