ಮಡಿಕೇರಿ, ಆ. ೨೮: ಜಿಲ್ಲಾ ಕೇಂದ್ರ ಮಡಿಕೇರಿಯ ಜಿಲ್ಲಾಧಿಕಾರಿಗಳ ಕಚೆರಿಯಲ್ಲಿಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರ ಸಭೆ ಏರ್ಪಡಿಸಲಾ ಗಿತ್ತು. ಸಭೆಯ ಬಗ್ಗೆ ಮಾಹಿತಿ ಇದ್ದ ಮೇರೆಗೆ ಮಾಧ್ಯಮದವರು ಸಭೆಗೆ ತೆರಳಿದ್ದರು. ಗೃಹಲಕ್ಷಿö್ಮ ಯೋಜನೆಯ ಪೂರ್ವಬಾವಿ ಸಭೆ ಆಗಿದ್ದರಿಂದ ಮಾಹಿತಿ ಪಡೆಯುವ ಸಲುವಾಗಿ ಎಲ್ಲರೂ ಆಗಮಿಸಿದ್ದರು. ಆದರೆ ಸಭೆಗೆ ಮುನ್ನ ಸಚಿ ವರು ಸಭೆಯ ನಂತರ ಮಾಹಿತಿ ನೀಡುವದಾಗಿ ಹೇಳಿದರು. ಸಭೆಯ ಬಗ್ಗೆ ಫೋಟೋ ಹಾಗೂ ಸ್ವಲ್ಪ ಮಾಹಿತಿಗಾಗಿ ವೀಡಿಯೋ ಮಾಡುತ್ತಿದ್ದಾಗ ಸಭೆಯಲ್ಲಿದ್ದ ಶಾಸಕ ಮಂಥರ್ ಗೌಡ ಮಾಧ್ಯಮದವರನ್ನು ಹೊರಗೆ ಕಳುಹಿಸುವಂತೆ ಸೂಚನೆ ನೀಡಿದ ಮೇರೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ವೀಣಾ ವಾರ್ತಾಧಿಕಾರಿ ಚಿನ್ನಸ್ವಾಮಿ ಅವರಿಗೆ ಮಾಧ್ಯಮದವರನ್ನು ಹೊರಕ್ಕೆ ಹೋಗಲು ಹೇಳಿದರು. ಅಸಮಾಧಾನಿತರಾದ ಮಾಧ್ಯಮದವರು ಹೊರಗಡೆ ಬಂದರು. ಆದರೆ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಕುಳಿತ್ತಿದ್ದರು. ಮಾಧ್ಯಮದವರಿಗೆ ಅವಕಾಶ ನೀಡದೆ ಅಧಿಕಾರಿಗಳ ಸಭೆಯಲ್ಲಿ ರಾಜಕಾರಣಿಗೆ ಅವಕಾಶ ನೀಡಿದ್ದನ್ನು ಆಕ್ಷೇಪಿಸಿದ ಮಾಧ್ಯಮದವರು ಸಭೆ ಬಹಿಷ್ಕರಿಸಿ ಹೊರ ನಡೆದರು. ನಂತರ ಧರ್ಮಜ ಅವರನ್ನು ಹೊರ ಕಳುಹಿಸಲಾಯಿತು.