ಸಿದ್ದಾಪುರ, ಆ. ೨೮: ಕಾಡಾನೆಗಳು ದಾಳಿ ನಡೆಸಿ ಗೋದಾಮಿಗೆ ಹಾನಿ ಗೊಳಿಸಿರುವ ಘಟನೆ ಕರಡಿಗೋಡು ಗ್ರಾಮದ ಚಿಕ್ಕನಹಳ್ಳಿಯಲ್ಲಿ ನಡೆದಿದೆ. ಕರಡಿ ಗೋಡು ಗ್ರಾಮದ ಚಿಕ್ಕನಹಳ್ಳಿ ಕಾಫಿ ಬೆಳೆಗಾರರಾದ ಜೇಕಬ್ ಚೆರಿಯನ್ ಎಂಬವರ ಮನೆ ಬಳಿ ಇರುವ ಗೋದಾಮಿಗೆ

ತಾ. ೨೭ ರಂದು ಮಧ್ಯರಾತ್ರಿ ಕಾಡಾನೆಗಳು ಮನೆ ಹಾನಿಗೊಳಿಸಿ ಮೇಲ್ಛಾವಣೆಯ ಶೀಟ್‌ಗಳನ್ನು ಎಳೆದು ಹಾಕಿದೆ. ಅಲ್ಲದೇ ಕಾಫಿ ತೋಟದಲ್ಲಿ ದಾಂಧಲೆ ನಡೆಸಿದ್ದು, ಅಡಿಕೆ ಮರಗಳನ್ನು ಕಾಫಿ ಗಿಡಗಳನ್ನು ನಾಶಗೊಳಿಸಿರುತ್ತದೆಂದು ಚೆರಿಯನ್ ತಿಳಿಸಿದ್ದಾರೆ.

ಕಳೆದ ಒಂದು ವಾರಗಳ ಹಿಂದೆ ಇವರಿಗೆ ಸೇರಿದ ನಾಯಿ ಗೂಡಿಗೆ ಕಾಡಾನೆಗಳು ಹಾನಿಗೊಳಿಸಿತ್ತು. ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದ ಮೇರೆಗೆ ಸ್ಥಳಕ್ಕೆ ವಿರಾಜಪೇಟೆ ವಲಯ ಅರಣ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಮೀಪದ ಅರಣ್ಯದೊಳಗಿನಿಂದ ಕಾಡಾನೆಗಳು ದಾಟಿ ಕಾಫಿ ತೋಟಗಳಿಗೆ ಲಗ್ಗೆ ಇಡುತ್ತಿದೆಯೆಂದು ಸ್ಥಳೀಯರು ತಿಳಿಸಿದ್ದಾರೆ.