ವೀರಾಜಪೇಟೆ, ಆ. ೨೭: ವಿದ್ಯಾರ್ಥಿ ಜೀವನ ಮಹತ್ವವಾದದ್ದು, ಪೋಷಕರು ಮತ್ತು ಶಿಕ್ಷಕರು ಕಲಿಸಿರುವುದನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿ ಕೊಳ್ಳುವುದ ರೊಂದಿಗೆ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳು ವಂತಾಗಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಸಂತೋಷ ಕೊಠಾರಿ ಹೇಳಿದರು.

ತಾಲೂಕು ಕಾನೂನು ಸೇವೆಗಳ ಸಮಿತಿ, ವೀರಾಜಪೇಟೆ ವಕೀಲರ ಸಂಘ ಮತ್ತು ಸರಕಾರಿ ಪದವಿಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶ್ವ ಯುವ ದಿನಾಚರಣೆ ಮತ್ತು ಮಾದಕ ವ್ಯಸನದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಉದ್ಘಾಟಿಸಿದ ನ್ಯಾಯಾಧೀಶ ಸಂತೋಷ ಕೊಠಾರಿ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ಸರಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಣ ಸಿಗಲ್ಲ ಅನ್ನೊದು ಸುಳ್ಳು, ನಾವೆಲ್ಲ ಸರಕಾರಿ ಶಾಲೆಯಲ್ಲಿಯೇ ಕಲಿತು ಬಂದವರು. ವಿದ್ಯಾರ್ಥಿ ಜೀವನದಲ್ಲಿ ಶ್ರದ್ಧೆಯಿಂದ ಕಲಿತು ಗುರಿ ಮುಟ್ಟುವಂತಾಗಬೇಕು. ನಮ್ಮಿಂದ ಈ ಸಮಾಜಕ್ಕೆ ಏನಾದರು ಕೊಡುಗೆ ನೀಡಬೇಕೆಂಬ ಮನಸ್ಸು ಇರಬೇಕು ಎಂದರು.

ವೀರಾಜಪೇಟೆ ವಕೀಲರ ಸಂಘದ ಅಧ್ಯಕ್ಷ ಕೆ.ಜಿ. ಅಪ್ಪಣ್ಣ ಅವರು ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಕೊಡಗು ಜಿಲ್ಲೆ ಭಾರತ ದೇಶದ ಹಾಕಿ ತಂಡಕ್ಕೆ ೫೭ ಹಾಕಿ ಆಟಗಾರರನ್ನು ನೀಡಿದಂತಹ ಜಿಲ್ಲೆಯಾಗಿದೆ. ಆದರೆ ಇತ್ತೀಚೆಗೆ ಕೊಡಗಿನಲ್ಲಿ ಗಾಂಜಾ ಹಾವಳಿ ಹೆಚ್ಚಾಗುತ್ತಿರುವುದು ಬೇಸರ ತಂದಿದೆ. ಯುವಕರು ದೇಶದ ಒಂದು ಶಕ್ತಿ, ಮಾದಕ ವಸ್ತುಗಳ ಬಗ್ಗೆ ಎಚ್ಚರದಿಂದಿರಬೇಕು ಎಂದರು.

ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಎನ್.ಕೆ. ಜ್ಯೋತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಮಕ್ಕಳಿಗೆ ತಂದೆ-ತಾಯಿ ಮೊದಲ ಗುರು ನಂತರ ಶಿಕ್ಷಕರು. ಪ್ರತಿಯೊಬ್ಬರು ಹಿರಿಯರಿಗೆ ಗೌರವ ನೀಡುವಂತಾಗ ಬೇಕು ಎಂದರು. ಅಪರ ಸಿವಿಲ್ ನ್ಯಾಯಾಧೀಶರಾದ ಪ್ರದೀಪ್ ಪೊತದಾರ್ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಉಪನ್ಯಾಸಕರಾದ ಪವಿತ್ರ ಕುಮಾರಿ, ಪಿ.ಎ. ಸುಜಾತ, ವಿನೋದ್ ಕುಮಾರ್ ಸೇರಿದಂತೆ ಕಾಲೇಜಿನ ಎಲ್ಲಾ ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ಈ ಸಂದರ್ಭ ವಿದ್ಯಾರ್ಥಿಗಳಿಂದ ಗೀತ ಗಾಯನ ನಡೆಯಿತು.