ನಾಪೋಕ್ಲು, ಆ. ೨೭: ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಮಡಿಕೇರಿ ತಾಲೂಕಿನ ವಿವಿಧ ಪ್ರೌಢಶಾಲೆಗಳ ಶಿಕ್ಷಕರ ತಾಲೂಕು ಮಟ್ಟದ ಕಾರ್ಯಾಗಾರವನ್ನು ವಿವಿಧ ಪ್ರೌಢಶಾಲೆಗಳಲ್ಲಿ ಆಯೋಜಿಸಲಾಗಿದ್ದು, ಇಂಗ್ಲೀಷ್ ವಿಷಯದ ತರಬೇತಿ ಕಾರ್ಯಾಗಾರ ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆಯಿತು.

ಕಾರ್ಯಾಗಾರವನ್ನು ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಬಾರ ಪ್ರಾಂಶುಪಾಲ ಶಿವಣ್ಣ ಹಾಗೂ ಕಕ್ಕಬೆ ಪ್ರೌಢಶಾಲೆಯ ಶಿಕ್ಷಕ ಕುಟ್ಟಂಜೆಟ್ಟಿರ ಶರತ್ ಹಾಗೂ ಶಿಕ್ಷಕ ವೃಂದ ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿದರು.

ವಿವಿಧ ಸಂಪನ್ಮೂಲ ವ್ಯಕ್ತಿಗಳು ಸಭೆಯಲ್ಲಿ ಪಾಲ್ಗೊಂಡು ಪರೀಕ್ಷಾ ಫಲಿತಾಂಶ ಉತ್ತಮಪಡಿಸುವ ನಿಟ್ಟಿನಲ್ಲಿ ಮಾರ್ಗದರ್ಶನ ನೀಡಿದರು.

ಸಮಾಜ ವಿಜ್ಞಾನ ವಿಷಯಕ್ಕೆ ಸಂಬAಧಿಸಿದAತೆ ಸಮೀಪದ ಮೂರ್ನಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ತರಬೇತಿ ಕಾರ್ಯಾಗಾರ ನಡೆಯಿತು. ಹಿಂದಿ ವಿಷಯದ ಕುರಿತು ತರಬೇತಿ ಕಾರ್ಯಾಗಾರ ಬುಧವಾರ ಹಾಕತ್ತೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಯಿತು. ಗುರುವಾರ ಗಣಿತ ವಿಷಯದ ಕುರಿತ ತರಬೇತಿ ಕಾರ್ಯಾಗಾರ ಮಡಿಕೇರಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ, ಶುಕ್ರವಾರ ವಿಜ್ಞಾನ ವಿಷಯದ ತರಬೇತಿ ಕಾರ್ಯಾಗಾರ ಮಡಿಕೇರಿಯ ಸಂತ ಮೈಕಲರ ಪ್ರೌಢಶಾಲೆಯಲ್ಲಿ ಹಾಗೂ ಕನ್ನಡ ವಿಷಯದ ಕುರಿತ ತರಬೇತಿ ಕಾರ್ಯಾಗಾರ ಆಗಸ್ಟ್ ೩೧ ರಂದು ಮಡಿಕೇರಿಯ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ನಡೆಯಲಿದೆ.

-ದುಗ್ಗಳ