ಗೋಣಿಕೊಪ್ಪ, ಆ. ೨೭: ಚೆನ್ನಯ್ಯನಕೋಟೆ ಓಣಂ ಸಮಿತಿ ವತಿಯಿಂದ ಸೆಪ್ಟೆಂಬರ್ ೩ ರಂದು ಚೆನ್ನಯ್ಯನಕೋಟೆ ಶಾಲಾ ಮೈದಾನದಲ್ಲಿ ಓಣಂ ಆಚರಣೆ ಆಯೋಜಿಸಲಾಗಿದೆ ಎಂದು ಸಮಿತಿ ಉಪಾಧ್ಯಕ್ಷ ಕೆ.ಎಂ. ರತೀಶ್ ಕುಮಾರ್ ತಿಳಿಸಿದ್ದಾರೆ.

ಓಣಂ ಪ್ರಯುಕ್ತ ಎಲ್ಲ ಸಾರ್ವಜನಿಕರು ಮುಕ್ತವಾಗಿ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದ್ದು, ಓಟ, ಹಗ್ಗಜಗ್ಗಾಟ, ವಿಷದ ಚೆಂಡು, ಮಡಕೆ ಒಡೆಯುವ ಸ್ಪರ್ಧೆ, ಮ್ಯೂಸಿಕಲ್ ಚೇರ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೆಳಿಗ್ಗೆ ೮ ಗಂಟೆಗೆ ಅಯ್ಯಪ್ಪ ದೇವಸ್ಥಾನದಲ್ಲಿ ಪೂಜೆ ನಡೆಸಿ ಚಂಡೆ ವಾದ್ಯದೊಂದಿಗೆ ಶಾಲಾ ಮೈದಾನಕ್ಕೆ ಮೆರವಣಿಗೆಯಲ್ಲಿ ತೆರಳಲಾಗುವುದು. ನಂತರ ಮಕ್ಕಳ ಛದ್ಮವೇಷ, ಕ್ರೀಡಾಕೂಟ ನಡೆಯಲಿದೆ. ಮಧ್ಯಾಹ್ನ ರೋಚಸ್ ಶಾದಿ ಮಹಲ್‌ನಲ್ಲಿ ಓಣಂ ಸಧ್ಯ ನಡೆಯಲಿದೆ. ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಕಾರ್ಯದರ್ಶಿ ಆರ್. ಹರೀಶ್, ಕ್ರೀಡಾಕೂಟ ಸಹ ಉಸ್ತುವಾರಿ ಅನಿಲ್ ಮೋನು ಇದ್ದರು.