ಶ್ರೀಮಂಗಲ, ಆ. ೨೬ : ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಗರಕೇರಿ ಗ್ರಾಮದಲ್ಲಿ ಕಾಡಾನೆ ಹಿಂಡುಗಳು ಕಾಫಿ ತೋಟಕ್ಕೆ ನುಗ್ಗಿ ಅಪಾರ ಪ್ರಮಾಣದಲ್ಲಿ ನಷ್ಟ ಮಾಡಿದ್ದು ಅರಣ್ಯ ಇಲಾಖೆ ನಷ್ಟಗೊಂಡ ಬೆಳೆಗಾರರಿಗೆ ಸೂಕ್ತ ಪರಿಹಾರ ತಕ್ಷಣ ನೀಡಬೇಕೆಂದು ಬೆಳೆಗಾರರು ಒತ್ತಾಯಿಸಿದ್ದಾರೆ.

ಗ್ರಾಮದ ಬಲ್ಯಮೀದೇರಿರ ಎಂ.ರನ್ನು ಮತ್ತು ಮಂಜು ಅವರ ಕಾಫಿ ತೋಟದಲ್ಲಿ ಕಾಡಾನೆ ಮರಿ ಹಾಕಿ ಅಲ್ಲಿಯೇ ಕಾಡಾನೆ ಹಿಂಡುಗಳು ಬೀಡುಬಿಟ್ಟ ಹಿನ್ನಲೆ ಕಾಫಿ, ಕಾಳುಮೆಣಸು ಬೆಳೆಗಳನ್ನು ಅಪಾರ ಪ್ರಮಾಣದಲ್ಲಿ ನಷ್ಟ ಮಾಡಿದ್ದು ಕಾಫಿ ಗಿಡಗಳು ಬೇರು ಸಹಿತ ನೆಲಕ್ಕೆ ಬಿದ್ದಿವೆ. ಫಸಲು ಬರುವ ನೂರಾರು ಗಿಡಗಳು ನಷ್ಟವಾಗಿದ್ದು ಈ ಬಗ್ಗೆ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಒದಗಿಸಬೇಕೆಂದು ನಷ್ಟಗೊಳಗಾದ ಬೆಳೆಗಾರರು ಒತ್ತಾಯಿಸಿದ್ದಾರೆ.

ರಾತ್ರಿ ಕಾಡಾನೆ ಬಂದಿರುವ ಸುಳಿವು ತಿಳಿದು ಮಾರನೇ ದಿನ ಹಗಲು ತೋಟ ಪರಿಶೀಲಿಸಲು ತೆರಳಿದ ಬೆಳೆಗಾರ ಬಲ್ಯಮೀದೇರಿರ ರನ್ನು ಅವರ ಮೇಲೆ ಏಕಾಏಕಿ ಕಾಡಾನೆ ಎದುರಾಗಿದ್ದು ಸ್ವಲ್ಪದರಲ್ಲಿ ಬೆಳೆಗಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಳೆಗಾರನ ಮೇಲೆ ಪ್ರಕರಣ ದಾಖಲು

ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಗರಕೇರಿ ಗ್ರಾಮದ ಬಲ್ಯಮೀದೇರಿರ ಎಂ. ರನ್ನು ಅವರ ತೋಟಕ್ಕೆ ಕಾಡಾನೆ ಹಿಂಡು ನುಗ್ಗಿ ಫಸಲು ಸಹಿತ ಕಾಫಿ ಗಿಡಗಳನ್ನು ನಷ್ಟ ಮಾಡಿದ್ದಲ್ಲದೇ, ಅವರ ಸಮೀಪದ ತೋಟವಾದ ಮಂಜು ಅವರ ತೋಟದಲ್ಲಿ ಕಾಡಾನೆ ಮರಿ ಹಾಕಿತ್ತು. ಈ ಸಂದರ್ಭ ಕಾಫಿ ಪಸಲು ಹಾಗೂ ಗಿಡಗಳು ನಷ್ಟವಾಗಿರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿತ್ತು. ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಬ್ರಹ್ಮಗಿರಿ ರಕ್ಷಿತಾರಣ್ಯದ ಶ್ರೀಮಂಗಲ ವಲಯದ ಫಾರೆಸ್ಟರ್ ಲಿಂಗಪ್ಪ ಅವರ ಮೇಲೆ ಬೆಳೆಗಾರ ಬಿ.ಎಂ. ರನ್ನು ಅವರು ಕೊಲೆ ಬೆದರಿಕೆಯೊಡ್ಡಿ, ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಹಿನ್ನೆಲೆಯಲ್ಲಿ ಶ್ರೀಮಂಗಲ ಠಾಣೆಯಲ್ಲಿ ಐಪಿಸಿ ಸೆಕ್ಷನ್ ಯುಎಸ್ ೩೪೧, ೩೩೨, ೩೫೩, ೫೦೪,೫೦೬ ಸೆಕ್ಷನ್ ಅಡಿ ೫೦/೨೦೨೩ ಸಂಖ್ಯೆಯಡಿ ಪ್ರಕರಣ ದಾಖಲಾಗಿದೆ.

ಬೆಳೆಗಾರರ ಒಕ್ಕೂಟ ತೀವ್ರ ಖಂಡನೆ

ಬೆಳೆಗಾರನ ವಿರುದ್ಧ ಪೋಲಿಸ್ ಇಲಾಖೆ ಪ್ರಕರಣ ದಾಖಲಿಸಿರುವುದನ್ನು ಕೊಡಗು ಬೆಳೆಗಾರರ ಒಕ್ಕೂಟ ತೀವ್ರವಾಗಿ ಖಂಡಿಸಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಒಕ್ಕೂಟದ ಅಧ್ಯಕ್ಷ ಕೇಚಂಡ ಎಂ. ಕುಶಾಲಪ್ಪ ಅವರು ಕಾಡಾನೆ ದಾಳಿಯಿಂದ ನೂರಾರು ಫಸಲು ಬರುವ ಕಾಫಿ ಗಿಡಗಳು ನಷ್ಟವಾಗಿದೆ. ಈ ಬಗ್ಗೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಗಳನ್ನು ಪ್ರಶ್ನಿಸಿದ್ದ ಬೆಳೆಗಾರ ಬಿ.ಎಂ. ರನ್ನು ಅವರ ಮೇಲೆ ಸುಳ್ಳು ಪ್ರಕರಣವನ್ನು ದಾಖಲಿಸಲಾಗಿದೆ. ತಮಗೆ ಆದ ನಷ್ಟವನ್ನು ಬೆಳೆಗಾರರು ಪ್ರಶ್ನಿಸುವುದೇ ಅಪರಾಧವಾಗಿದೆ. ಬೆಳೆ ನಷ್ಟಗೊಂಡ ಬೆಳೆಗಾರನ ಮೇಲೆ ಬೆಳೆ ನಷ್ಟದ ನೋವು ಒಂದು ಕಡೆ ಅನುಭವಿಸುತ್ತಿರುವಾಗ ಅವರ ಮೇಲೆಯೇ ಪ್ರಕರಣ ದಾಖಲಿಸಿ ಕಿರುಕುಳ ನೀಡುವ ಅರಣ್ಯ ಇಲಾಖೆಯ ಉದ್ಧಟತನವನ್ನು ಬೆಳೆಗಾರರ ಒಕ್ಕೂಟ ಖಂಡಿಸುತ್ತದೆ, ಈ ಪ್ರಕರಣವನ್ನು ಕೂಡಲೇ ವಾಪಸು ಪಡೆಯಬೇಕು. ಇಲ್ಲದಿದ್ದರೆ ಅರಣ್ಯ ಇಲಾಖೆಯ ಕಚೇರಿ ಎದುರು ಬೆಳೆಗಾರರನ್ನು ಸಂಘಟಿಸಿ ಪ್ರತಿಭಟನೆ ನಡೆಸುವ ಸಿದ್ಧತೆ ನಡೆಸುವುದಾಗಿ ಎಚ್ಚಸಿದ್ದಾರೆ.