ಸಿದ್ದಾಪುರ, ಆ. ೨೭: ಅರಣ್ಯ ಇಲಾಖೆಯ ಪಿಸಿಪಿ ಹಾಗೂ ಆರ್‌ಆರ್‌ಟಿ ಸಿಬ್ಬಂದಿಗೆ ಸುಮಾರು ೪ ತಿಂಗಳುಗಳಿAದ ವೇತನ ಪಾವತಿಯಾಗದ ಬಗ್ಗೆ ಹಾಗೂ ಇನ್ನಿತರ ಮೂಲಭೂತ ಬೇಡಿಕೆಗೆ ಆಗ್ರಹಿಸಿ ಪಿಸಿಪಿ ಹಾಗೂ ಆರ್‌ಆರ್‌ಟಿ ಸಿಬ್ಬಂದಿಗಳ ಸಂಘದ ಕೊಡಗು ಜಿಲ್ಲಾಧ್ಯಕ್ಷ ಹರೀಶ್ ನೇತೃತ್ವದಲ್ಲಿ ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಅವರಿಗೆ ಮನವಿ ಸಲ್ಲಿಸಲಾಯಿತು.
ಆರ್‌ಆರ್‌ಟಿ ಹಾಗೂ ಪಿಸಿಪಿ ಸಿಬ್ಬಂದಿಗಳಿಗೆ ಗುತ್ತಿಗೆ ಅಧಾರದಲ್ಲಿ ವೇತನ ಪಾವತಿಸುತ್ತಿರುವುದನ್ನು ರದ್ದುಪಡಿಸಿ ಇಲಾಖೆ ಮೂಲಕ ನೇರವಾಗಿ ನೌಕರರ ಖಾತೆಗೆ ವೇತನ ಪಾವತಿಸುವಂತೆ ಒತ್ತಾಯಿಸಲಾಯಿತು. ಅಲ್ಲದೆ ೧೫-೨೦ ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ಕರ್ತವ್ಯದಲ್ಲಿರುವ ಪಿಸಿಪಿ ನೌಕರರಿಗೆ ವಾರ್ಷಿಕ ಹೆಚ್ಚುವರಿ ವೇತನವನ್ನು ತಡೆಹಿಡಿದಿರುವ ಬಗ್ಗೆ ಮತ್ತು ಕ್ಷೇಮಾಭಿವೃದ್ಧಿ ಅಧಿನಿಯಮದಡಿ ಪಿಸಿಪಿ ನೌಕರರನ್ನು ಖಾಯಂ ಗೊಳಿಸುವ ಬಗ್ಗೆ ಹಾಗೂ ಮುಂಚೂಣಿ ಸಿಬ್ಬಂದಿ ಆರ್‌ಆರ್‌ಟಿ ಮತ್ತು ಪಿಸಿಪಿ ನೌಕರರಿಗೆ ಸಮವಸ್ತç ಹಾಗೂ ಮೂಲಭೂತ ಸವಲತ್ತುಗಳನ್ನು ಕೊಡಿಸದೇ ಇರುವ ಬಗ್ಗೆ ಮನವಿ ಪತ್ರದಲ್ಲಿ ಗಮನ ಸೆಳೆಯಲಾಯಿತು.
ಈ ಸಂದರ್ಭ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಹಾಗೂ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಹಾಜರಿದ್ದರು.