ಕೂಡಿಗೆ, ಆ. ೨೫: ಅಖಿಲ ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಒಕ್ಕೂಟದ ಕುಶಾಲನಗರ ಉಪ ಶಾಖೆಯ ಮಹಾಸಭೆ ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಮೈಸೂರು ವಿಭಾಗೀಯ ಒಕ್ಕೂಟದ ಅಧ್ಯಕ್ಷ ವಿ.ಜಿ. ಅಶೋಕ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ನಮ್ಮ ಬೇಡಿಕೆಗಳ ಈಡೇರಿಕೆಗೆ ಕೆಲವರು ಕೈಗೊಂಡ ಹೋರಾಟದ ಫಲವನ್ನು ಹಲವರು ಪಡೆದು ಕೊಳ್ಳುತ್ತಿರುವುದು ಹೆಮ್ಮೆಯ ವಿಚಾರ. ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದರು.
ಸೋಮವಾರಪೇಟೆ ಶಾಖೆಯ ಪ್ರಬಂಧಕ ಸತೀಶ್ ಕುಮಾರ್ ಮಾತನಾಡಿ, ಪ್ರತಿನಿಧಿಗಳು ಹಣ ಮಾಡುವ ಹಾಗೂ ರಾಜಕೀಯ ಉದ್ದೇಶದಿಂದ ಸಂಘಟನೆಗೆ ಸೇರಬಾರದು ಎಂದರು. ಪ್ರಾಸ್ತಾವಿಕವಾಗಿ ಸಂಘಟನೆ ಮಹತ್ವದ ಬಗ್ಗೆ ಮಾತನಾಡಿದ ವಿಭಾಗೀಯ ಕಾರ್ಯದರ್ಶಿ ಎಂ. ರಾಜು, ಜನರ ಹಣವನ್ನು ಜನರ ಅಭಿವೃದ್ಧಿಗೆ ವಿನಿಯೋಗಿಸುವ ಸಂಸ್ಥೆ ಎಲ್‌ಐಸಿ. ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಸಂಘಟನೆ ಸ್ಥಾಪನೆಯಾಯಿತು. ಲಿಯಾಫಿ ಸಂಘಟನೆಯ ಹೋರಾಟದ ಫಲವಾಗಿ ಇಂದು ಪ್ರತಿನಿಧಿಗಳಿಗೆ ಗೌರವಯುತ ಸ್ಥಾನಮಾನ ಲಭಿಸಿದೆ. ಇದನ್ನು ಬಳಸಿ ಕೊಂಡು ಅಭಿವೃದ್ಧಿ ಹೊಂದಿದವರು ಸಂಘಟನೆಗೆ ಚಿರ ಋಣಿಯಾಗಿರಬೇಕು ಎಂದರು.
ವಿಭಾಗೀಯ ಜಂಟಿ ಕಾರ್ಯದರ್ಶಿ ಟಿ.ಬಿ. ಜಗದೀಶ್ ಮಾತನಾಡಿದರು. ಕುಶಾಲನಗರ ಶಾಖೆಯ ಅಧ್ಯಕ್ಷ ಕೆ.ಸಿ.ಮೋಹನ್ ಅಧ್ಯಕ್ಷತೆ ವಹಿಸಿದ್ದರು. ಪ್ರತಿನಿಧಿ ದಿನೇಶ್ ಕುಮಾರ್ ವಾರ್ಷಿಕ ವರದಿ ಮಂಡನೆ, ಹೇಮಾವತಿ ಆಯವ್ಯಯ ಮಂಡನೆ ಮಾಡಿದರು.
ಇದೇ ಸಂದರ್ಭ ಗಣ್ಯರು, ಹಿರಿಯ ಪ್ರತಿನಿಧಿಗಳು, ವಿಭಾಗೀಯ ಮಟ್ಟದ ಪದಾಧಿಕಾರಿಗಳು, ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ಕುಶಾಲ ನಗರ ಶಾಖೆಯ ನಿರ್ದೇಶಕರುಗಳಿಗೆ ಸನ್ಮಾನ ನೆರವೇರಿಸಲಾಯಿತು. ಕುಶಾಲನಗರ ಸಮಿತಿ ಬದಲಾವಣೆ ಬಗ್ಗೆ ಚರ್ಚೆ, ಪ್ರತಿನಿಧಿಗಳಿಂದ ಅನಿಸಿಕೆ ಅಭಿಪ್ರಾಯ ವ್ಯಕ್ತಗೊಂಡಿತು.
ಈ ಸಂದರ್ಭ ವಿವಿಧ ಘಟಕಗಳ ಪ್ರಮುಖರಾದ ರಿಷಿ ಚರಣ್, ಸವಿತಾ, ಟಿ.ಬಿ. ಜಗದೀಶ್, ಶಿವಣ್ಣ, ತಿಲಕ್ ಬಾಬು, ವಸಂತ ಕುಮಾರ್, ಚಂಗಪ್ಪ ಮತ್ತಿತರರು ಇದ್ದರು.