ಮಡಿಕೇರಿ, ಆ. ೨೫: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಷನ್‌ನ ಕೊಡಗು ಘಟಕದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಬಾಕಿ ಇರುವ ೨೦೨೧-೨೨ನೇ ಶೈಕ್ಷಣಿಕ ಅರ್ಜಿಗಳಿಗೆ ಕೂಡಲೇ ಹಣ ವರ್ಗಾವಣೆ ಮಾಡಬೇಕು. ಕಾರ್ಡ್ ನವೀಕರಣಕ್ಕೆ ವೇತನ ಚೀಟಿ, ಹಾಜರಾತಿ ಪಟ್ಟಿ ಕಡ್ಡಾಯ ಆದೇಶವನ್ನು ಹಿಂಪಡೆಯಬೇಕು. ಬೋಗಸ್ ಕಾರ್ಡ್ ನಿಯಂತ್ರಿಸಿ ನೈಜ ಕಾರ್ಮಿಕರನ್ನು ಮಾತ್ರ ನೋಂದಣಿ ಮತ್ತು ನವೀಕರಣ ಮಾಡಬೇಕು. ರಾಜ್ಯ ಸರ್ಕಾರದ ಆರೋಗ್ಯ ಸಂಜೀವಿನಿ ಯೋಜನೆ ಯನ್ನು ಕಟ್ಟಡ ಕಾರ್ಮಿಕರು ಮತ್ತು ಅವರ ಕುಟುಂಬದವರಿಗೂ ಜಾರಿಗೊಳಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಅಧ್ಯಕ್ಷ ಎ.ಸಿ. ಸಾಬು, ಖಜಾಂಚಿ ಹಮೀದ್, ಸಿಐಟಿಯು ಜಿಲ್ಲಾ ಖಜಾಂಚಿ ಎನ್.ಡಿ. ಕುಟ್ಟಪ್ಪ, ಪದಾಧಿಕಾರಿಗಳಾದ ಹರಿದಾಸ್, ಪದ್ಮಿನಿ, ಸುರೇಶ್, ಮತ್ತಿತರರು ಪಾಲ್ಗೊಂಡಿದ್ದರು.