ಸುಂಟಿಕೊಪ್ಪ, ಆ. ೨೫: ಐಗೂರು ಗ್ರಾಮ ಪಂಚಾಯಿತಿಯ ನೂತನ ಆಡಳಿತ ಮಂಡಳಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿದೆ.

ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐಗೂರು, ಕಬ್ಬಿಣ ಸೇತುವೆ, ಕಾಜೂರು, ಯಡವಾರೆ, ಸಜ್ಜಳ್ಳಿ, ಯಡವನಾಡು ಈ ಗ್ರಾಮದ ೧೩ ಕೋಳಿ ಅಂಗಡಿ, ದಿನಸಿ, ಗೂಡಂಗಡಿ ಹಾಗೂ ಕೆಲವು ನಿವಾಸಿಗಳ ಮನೆಗಳಲ್ಲಿ ಅಕ್ರಮವಾಗಿ ರಾಜಾರೋಷವಾಗಿ ಮದ್ಯ ಮಾರಾಟ ನಡೆಯುತ್ತಿತ್ತು. ೧ ಪ್ಯಾಕೆಟ್ ೯೦ ಎಂಎಲ್‌ನ ಓರಿಜನಲ್ ಚಾಯ್ಸ್ಗೆ ಮದ್ಯದ ಅಧಿಕೃತ ಅಂಗಡಿಗಳಲ್ಲಿ ರೂ. ೪೦ ಇದ್ದರೆ ಅಕ್ರಮ ಮದ್ಯ ಮಾರಾಟಗಾರರು ರೂ. ೬೦ಕ್ಕೆ ಮಾರಾಟ ಮಾಡುತ್ತಿದ್ದು, ೯೦ ಎಂಎಲ್‌ನ ಮದ್ಯಕ್ಕೆ ಮಾರುಕಟ್ಟೆ ದರಕ್ಕಿಂತ ರೂ. ೪೦ ಅಧಿಕ ಲಾಭದಲ್ಲಿ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಐಗೂರಿನ ಕೆಲ ನಿವಾಸಿಗಳು ಸೋಮವಾರಪೇಟೆ ಅಬಕಾರಿ ಅಧಿಕಾರಿಗಳಿಗೆ ದೂರು ಸಲ್ಲಿಸಿದಾಗ ಅಲ್ಲಿನ ಸಿಬ್ಬಂದಿಗಳೇ ಅಕ್ರಮ ಮದ್ಯ ಮಾರಾಟಗಾರರಿಗೆ ದಾಳಿ ನಡೆಸುವ ಸುಳಿವು ನೀಡುತ್ತಿದ್ದರೆನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಐಗೂರು ಗ್ರಾ.ಪಂ. ನೂತನ ಅಧ್ಯಕ್ಷ ಜಿ.ಕೆ. ವಿನು ಹಾಗೂ ಉಪಾಧ್ಯಕ್ಷೆ ಗೌರಮ್ಮ ಅವರುಗಳು ಅಕ್ರಮ ಮದ್ಯ ಮಾರಾಟದ ಅಂಗಡಿಯವರಿಗೆ ನೋಟೀಸ್ ನೀಡಿದ್ದು, ಪರಿಣಾಮ ಈಗ ಅಕ್ರಮ ಮದ್ಯ ಮಾರಾಟ ಸ್ಥಗಿತಗೊಂಡಿದೆ.