ಸೋಮವಾರಪೇಟೆ, ಆ.೨೫: ಸಮೀಪದ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಡಿನಾಡೂರು ಗ್ರಾಮದಲ್ಲಿ ಕಾಡಾನೆ ದಾಳಿಗೆ ಕೃಷಿಕರೋರ್ವರು ಬಲಿಯಾಗಿರುವ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ.
ಆಡಿನಾಡೂರು ಗ್ರಾಮ ನಿವಾಸಿ, ಕೃಷಿಕ ಬಾಣಗೇರಿ ಈರಪ್ಪ (೬೩) ಎಂಬವರೆ ಕಾಡಾನೆ ದಾಳಿಗೆ ಬಲಿಯಾದ ದುರ್ದೈವಿ. ನಿಡ್ತ ಮೀಸಲು ಅರಣ್ಯದ ಬಾಣಾವರ ಅರಣ್ಯದಂಚಿಗೆ ಒಳಪಡುವ ಆಡಿನಾಡೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಕಾಡಾನೆ ದಾಳಿಗೆ ಒಳಗಾದ ಈರಪ್ಪ ಅವರು ಸ್ಥಳದಲ್ಲಿಯೇ ಇಹಲೋಕ ತ್ಯಜಿಸಿದ್ದಾರೆ. ಇಂದು ಬೆಳಿಗ್ಗೆ ಹಸುವನ್ನು
(ಮೊದಲ ಪುಟದಿಂದ) ಹುಡುಕಿಕೊಂಡು ಆಡಿನಾಡೂರು ಗ್ರಾಮದ ಮನೆಯಿಂದ ಹೊಸಳ್ಳಿ ಗ್ರಾಮದಲ್ಲಿರುವ ಹೊಲಕ್ಕೆ ತೆರಳಿ ವಾಪಸ್ಸಾಗುತ್ತಿದ್ದ ಸಂದರ್ಭ, ಸುಮಾರು ೭.೩೦ಕ್ಕೆ ಎದುರಾದ ಕಾಡಾನೆ ಏಕಾಏಕಿ ಧಾಳಿ ನಡೆಸಿದೆ. ಇದರಿಂದಾಗಿ ಈರಪ್ಪ ಅವರ ತಲೆ, ಕಾಲು, ಸೊಂಟ ಸೇರಿದಂತೆ ದೇಹದ ಇತರ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳದಲ್ಲಿಯೇ ಅಸುನೀಗಿದ್ದಾರೆ.
ಬೆಳಿಗ್ಗೆಯೇ ಮನೆಯಿಂದ ತೆರಳಿದ ಪತಿ ವಾಪಸ್ಸಾಗದ ಹಿನ್ನೆಲೆ ಈರಪ್ಪ ಅವರ ಪತ್ನಿ ಹೇಮಾವತಿ ಅವರು ತಮ್ಮ ಮೊಮ್ಮಗಳು ಅನನ್ಯಳೊಂದಿಗೆ ಅರಣ್ಯದಂಚಿನಲ್ಲಿಯೇ ಹೊಲದ ಕಡೆಗೆ ತೆರಳಿದ್ದು, ಈ ಸಂದರ್ಭ ಕಾಲುದಾರಿಯಲ್ಲಿ ಮೃತದೇಹ ಪತ್ತೆಯಾಗಿದೆ. ಘಟನೆಯಿಂದ ದಿಗ್ಭಾçಂತರಾದ ಪತ್ನಿ ಹೇಮಾವತಿಯವರ ಗೋಳಾಟ ಕೇಳಿ ಸ್ಥಳೀಯರು ಸ್ಥಳಕ್ಕೆ ತೆರಳಿದ್ದು, ಘಟನೆಯ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆ ಮತ್ತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ತೆರಳಿದ ಪೊಲೀಸ್ ಇನ್ಸ್ಪೆಕ್ಟರ್ ರಾಮಚಂದ್ರನಾಯಕ್ ಹಾಗೂ ಸಿಬ್ಬಂದಿಗಳು, ಎಸಿಎಫ್ ಗೋಪಾಲ್, ಆರ್.ಎಫ್.ಓ. ಚೇತನ್, ಡಿ.ವೈ.ಎಸ್.ಪಿ. ಗಂಗಾಧರಪ್ಪ ಅವರುಗಳು ಪರಿಶೀಲನೆ ನಡೆಸಿದ್ದು, ಸ್ಥಳ ಮಹಜರು ನಂತರ ಮೃತದೇಹವನ್ನು ಸೋಮವಾರಪೇಟೆಯ ಶವಾಗಾರಕ್ಕೆ ಸಾಗಿಸಲಾಯಿತು. ಸಂಜೆ ವೇಳೆಗೆ ಮರಣೋತ್ತರ ಪರೀಕ್ಷೆ ನಡೆಸಿ, ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಡಿಸಿಎಫ್ ಎ.ಟಿ. ಪೂವಯ್ಯ ಅವರು ಶವಾಗಾರಕ್ಕೆ ಭೇಟಿ ನೀಡಿ ಮೃತದೇಹವನ್ನು ಪರಿಶೀಲಿಸಿ, ಅಧಿಕಾರಿಗಳಿಂದ ಘಟನೆಯ ಬಗ್ಗೆ ಮಾಹಿತಿ ಪಡೆದರು.
ಎಂದಿನAತೆ ಮೇಯಲು ಬಿಟ್ಟಿದ್ದ ಹಸು ನಿನ್ನೆ ರಾತ್ರಿ ಮನೆಗೆ ವಾಪಸ್ ಬಾರದ ಹಿನ್ನೆಲೆ, ಇಂದು ಬೆಳಿಗ್ಗೆ ಹೊಸಳ್ಳಿ ಗ್ರಾಮದಂಚಿನ ಹೊಳೆ ಬದಿಯಲ್ಲಿರುವ ತಮ್ಮ ಹೊಲದ ಬಳಿ ತೆರಳಿ ಹುಡುಕಾಟ ನಡೆಸುತ್ತಿದ್ದ ಸಂದರ್ಭ ಕಾಡಾನೆ ದಾಳಿ ನಡೆಸಿ ತನ್ನ ಪತಿಯನ್ನು ಕೊಂದಿದೆ ಎಂದು ಮೃತರ ಪತ್ನಿ ಹೇಮಾವತಿ ಅವರು ನೀಡಿದ ದೂರಿನ ಮೇರೆ ಸೋಮವಾರಪೇಟೆ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಮೃತ ಈರಪ್ಪ ಅವರು ಪತ್ನಿ ಸೇರಿದಂತೆ ಈರ್ವರು ಪುತ್ರಿಯರನ್ನು ಅಗಲಿದ್ದಾರೆ.