ಸೋಮವಾರಪೇಟೆ, ಆ. ೨೫: ಕಾಫಿ ಬೆಳೆಗಾರರ ೧೦ ಹೆಚ್‌ಪಿವರೆಗಿನ ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ರೈತ ಸಂಘ ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಒತ್ತಾಯಿಸಿದ ತಾಲೂಕು ರೈತ ಸಂಘದ ಅಧ್ಯಕ್ಷ ಕೆ.ಎಂ. ದಿನೇಶ್ ಅವರು, ಹಿಂದಿನ ಸರ್ಕಾರಕ್ಕೆ ಈ ಬಗ್ಗೆ ಹಲವಷ್ಟು ಬಾರಿ ಮನವಿ ಸಲ್ಲಿಸಲಾಗಿತ್ತು. ಈಗಿನ ಸರ್ಕಾರದ ಗಮನ ಸೆಳೆದಿದ್ದರೂ, ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಮಾಡಿಲ್ಲ ಎಂದರು.
ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ರೈತರ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಅವರು ಕೊಟ್ಟ ಭರವಸೆಯನ್ನು ಈಡೇರಿಸುವ ಮೂಲಕ ಕೊಡಗಿನ ರೈತರ ಹಿತ ಕಾಯಬೇಕೆಂದು ಮನವಿ ಮಾಡಿದ ಅವರು, ತಪ್ಪಿದಲ್ಲಿ ತಮ್ಮ ನ್ಯಾಯೋಚಿತ ಬೇಡಿಕೆಗಾಗಿ ಮತ್ತೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದರು.
ಪಡಿತರ ಚೀಟಿ ತಿದ್ದುಪಡಿಗೆ ನಾಲ್ಕು ದಿನ ಅವಕಾಶ ನೀಡಿದ್ದರೂ ಸರ್ವರ್ ಸಮಸ್ಯೆಯಿಂದಾಗಿ ಯಾವುದೇ ತಿದ್ದುಪಡಿ ಆಗಿಲ್ಲ. ಗ್ರಾಮೀಣ ಭಾಗದಿಂದ ರೈತರು ಆಗಮಿಸಿ ಬರಿಗೈಯಲ್ಲಿ ಹಿಂತಿರುಗುವAತಾಗಿದೆ. ಈ ಬಗ್ಗೆ ಆಹಾರ ಇಲಾಖೆಯ ಅಧಿಕಾರಿಗಳು ತಕ್ಷಣ ಕ್ರಮಕೈಗೊಂಡು ತಿದ್ದುಪಡಿಗೆ ಕಾಲಾವಕಾಶ ನೀಡಬೇಕು. ಅಕ್ಕಿ ಪಡೆಯಲು ಪ್ರತಿ ತಿಂಗಳು ಹೆಬ್ಬೆಟ್ಟು ಸಹಿ ನೀಡುವುದನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದರು.
ಆರ್‌ಟಿಸಿ ಬೆಲೆಯನ್ನು ರೂ. ೨೫ಕ್ಕೆ ಏರಿಸಿರುವುದು ಸರಿಯಲ್ಲ. ಇದನ್ನು ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದ ಕೆ.ಎಂ. ದಿನೇಶ್, ತಾಲೂಕು ಕಚೇರಿಯಲ್ಲಿ ಯಾವುದೇ ಕೆಲಸ ಕಾರ್ಯಗಳು ಆಗುತ್ತಿಲ್ಲ. ೨೦೧೯ರಲ್ಲಿ ಆನ್‌ಲೈನ್ ಮೂಲಕ ದುರಸ್ತಿಗೆ ಅರ್ಜಿ ಸಲ್ಲಿಸಿದ್ದರೂ ಈವರೆಗೆ ವಿಲೇವಾರಿ ಮಾಡಿಲ್ಲ. ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ತರಲು ಅಧಿಕಾರಿಗಳೇ ಪರೋಕ್ಷ ಬೆಂಬಲ ನೀಡುತ್ತಿರುವ ಸಂಶಯ ಉಂಟಾಗಿದೆ. ತಕ್ಷಣ ದುರಸ್ತಿ ಅರ್ಜಿಗಳನ್ನು ವಿಲೇವಾರಿ ಮಾಡಬೇಕೆಂದು ಆಗ್ರಹಿಸಿದರು.
ಪ್ರಸಕ್ತ ಸಾಲಿನಲ್ಲಿ ಸುರಿದ ಮಳೆಗೆ ವಾತಾವರಣದಲ್ಲಿ ತೇವಾಂಶ ಅಧಿಕಗೊಂಡು ಕಾಫಿ ಮತ್ತು ಕರಿಮೆಣಸು ಬೆಳೆ ನಷ್ಟವಾಗಿದೆ. ಕಂದಾಯ ಇಲಾಖೆಯಿಂದ ಬೆಳೆಹಾನಿ ಪರಿಹಾರ ನೀಡಬೇಕೆಂದರು.
ಕಾಡಾನೆ-ಮಾನವ ಸಂಘರ್ಷ ತಡೆಗೆ ಇಲಾಖೆ ಗಂಭೀರವಾಗಿ ಚಿಂತಿಸಬೇಕು. ಒಂದು ಊರಿನಿಂದ ಮತ್ತೊಂದು ಊರಿಗೆ ಓಡಿಸಿದರೆ ಪ್ರಯೋಜನವಿಲ್ಲ. ಕಾಡಾನೆಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಲು ಇಲಾಖೆ ಮುಂದಾಗಬೇಕೆAದು ಗೋಷ್ಠಿಯಲ್ಲಿದ್ದ ಸಂಘದ ಸಂಚಾಲಕ ಗರಗಂದೂರು ಲಕ್ಷö್ಮಣ್ ಆಗ್ರಹಿಸಿದರು.
ಕಳೆದ ೨೦೧೭ರಲ್ಲಿ ಗುಡ್ಡೆಹೊಸೂರಿನ ಪಿಡಿಓ ಲೋಕಾಯುಕ್ತ ಧಾಳಿಗೆ ಒಳಗಾಗಿ ಬಂಧನಗೊAಡಿದ್ದರೂ ಸೇವೆಯಿಂದ ಅಮಾನತ್ತು ಪಡಿಸಿಲ್ಲ. ಈ ಪ್ರಕರಣದಲ್ಲಿ ಬಡಪಾಯಿ ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಲಾಗಿದೆ. ತಕ್ಷಣ ಪ್ರಕರಣದ ಪ್ರಮುಖ ಆರೋಪಿ ಪಿಡಿಓ ಅವರನ್ನು ಕರ್ತವ್ಯದಿಂದ ಅಮಾನತ್ತು ಮಾಡಬೇಕೆಂದು ಲಕ್ಷö್ಮಣ್ ಒತ್ತಾಯಿಸಿದರು.
ಆರ್‌ಎಂಸಿ ಮಾರುಕಟ್ಟೆಯಲ್ಲಿ ದಂಧೆ: ಇಲ್ಲಿನ ಆರ್‌ಎಂಸಿ ಮಾರುಕಟ್ಟೆಯಲ್ಲಿ ರೈತರ ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಕೆಲ ದಳ್ಳಾಳಿಗಳು ತಮ್ಮಿಷ್ಟದಂತೆ ಬೆಲೆ ನಿಗದಿಪಡಿಸುತ್ತಿದ್ದಾರೆ. ಶನಿವಾರಸಂತೆಯ ಶುಂಠಿ ವ್ಯಾಪಾರಿಯೋರ್ವ ರೈತರಿಗೆ ಬೆದರಿಕೆ ಹಾಕುತ್ತಿದ್ದು, ಕಳೆದ ವಾರ ಗಲಾಟೆಗೆ ಆಸ್ಪದವಾಗಿತ್ತು. ತಕ್ಷಣ ಅಧಿಕಾರಿಗಳು ಆರ್‌ಎಂಸಿ ಮಾರುಕಟ್ಟೆ ಅವ್ಯವಸ್ಥೆ ಸರಿಪಡಿಸಬೇಕು. ಪ್ರತಿ ವಾರ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಬೇಕೆಂದು ಕೆ.ಎಂ. ದಿನೇಶ್ ಆಗ್ರಹಿಸಿದರು.
ಗೋಷ್ಠಿಯಲ್ಲಿ ರೈತ ಸಂಘದ ಉಪಾಧ್ಯಕ್ಷ ಮಚ್ಚಂಡ ಅಶೋಕ್, ಸಂಚಾಲಕ ರಾಜಪ್ಪ, ಕಾರ್ಯದರ್ಶಿ ಅಬ್ಬೂರುಕಟ್ಟೆ ಚೇತನ್ ಉಪಸ್ಥಿತರಿದ್ದರು.