ಗೋಣಿಕೊಪ್ಪಲು, ಆ.೨೫ : ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಪ್ರದೇಶದಲ್ಲಿ ಕಳ್ಳತನ ಮಾಡಿ ತಲೆಮರೆಸಿ ಕೊಂಡಿದ್ದ ಆರೋಪಿ ಯಾದ ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಚಾವಶೇರಿ ನಿವಾಸಿ ಪಿ.ಆರ್. ಸಾಧಿಕ್ (೪೭) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿ ಯು ಈ ಹಿಂದೆ ತಿತಿಮತಿ ಗ್ರಾಮದ ಚೈನ್‌ಗೇಟ್ ಬಳಿಯ ಕಾರ್ತಿಕ್ ಎಂಬುವರ ಮನೆಗೆ ನುಗ್ಗಿ, ಮನೆಯಲ್ಲಿದ್ದ ದೇವರ ನಾಲ್ಕು ಹಿತ್ತಾಳೆಯ ದೀಪಾಲೆ ಕಂಬಗಳು, ನೀರಿನ ಮೋಟಾರು, ಗ್ಯಾಸ್ ಸ್ಟೌವ್, ಮಿಕ್ಸಿಯನ್ನು ಕದ್ದಿದ್ದ. ಅಲ್ಲದೇ ಅಲ್ಲೇ ಸಮೀಪದ ಎಳನೀರು ಅಂಗಡಿಗೆ ನುಗ್ಗಿದ್ದ ಈತ ಅಲ್ಲಿದ್ದ ಹಣ ತರಕಾರಿಗಳನ್ನು ಕದ್ದು ಪರಾರಿ ಯಾಗಿದ್ದ. ಮಾಯಮುಡಿ ಶಾಲೆಗೆ ನುಗ್ಗಿ ಗ್ರಂಥಾಲಯದ ಬೀಗ ಮುರಿದು ಅಲ್ಲಿದ್ದ ಕೆಲವು ಪೀಠೋಪಕರಣ ಗಳನ್ನು ಕಳುವು ಮಾಡಿದ್ದ.
ಡಿಎಸ್‌ಪಿ ಮೋಹನ್ ಕುಮಾರ್ ಮಾರ್ಗದರ್ಶನದಲ್ಲಿ ಗೋಣಿಕೊಪ್ಪ ವೃತ್ತ ನಿರೀಕ್ಷಕ ಗೋವಿಂದರಾಜ್ ಠಾಣಾಧಿಕಾರಿ ರೂಪಾದೇವಿ ಬೀರಾದರ್ ಹಾಗೂ ಸಿಬ್ಬಂದಿ ಕಾರ್ಯಾ ಚರಣೆಯಲ್ಲಿ ಪಾಲ್ಗೊಂಡಿದ್ದರು.