ಮಡಿಕೇರಿ, ಆ. ೨೫: ಆಧುನಿಕ ಜೀವನ ಪದ್ಧತಿಯಿಂದಾಗಿ ಮಾನ ವೀಯ ಮೌಲ್ಯಗಳು ಕುಸಿಯುತ್ತಿರುವ ಈ ಹೊತ್ತಿನಲ್ಲಿ ಹನ್ನೆರಡನೇ ಶತಮಾನದ ವಚನ ಸಾಹಿತ್ಯ ಮೌಲ್ಯಗಳು ಮನುಷ್ಯನ ಉತ್ತಮ ಜೀವನಕ್ಕೆ ಕಿರೀಟಪ್ರಾಯ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಎಸ್.ಎಲ್. ಹರ್ಷವರ್ಧನ್ ಹೇಳಿದರು.
ಕೊಡಗು ಜಿಲ್ಲಾ ವಚನ ಸಾಹಿತ್ಯ ವೇದಿಕೆ ವತಿಯಿಂದ ಮಡಿಕೇರಿಯ ಸರ್ಕಾರಿ ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ‘ವಚನಗಳ ನಡಿಗೆ ಶಾಲಾ ಕಾಲೇಜುಗಳೆಡೆಗೆ’ ಚಿಂತನಾ ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯದ ಅಮೂಲ್ಯ ಸಂಪತ್ತಾಗಿರುವ ವಚನಗಳನ್ನು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳ ಹಂತದಲ್ಲಿಯೇ ಅರಿಯಬೇಕು ಹಾಗೂ ವಚನಗಳ ಸಾರದಂತೆ ನಡವಳಿಕೆ ರೂಪಿಸಿಕೊಂಡಲ್ಲಿ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಅದು ಇಡೀ ಬದುಕಿಗೆ ವರವಾಗುತ್ತದೆ. ಹಾಗಾಗಿ ೯೦೦ ವರ್ಷಗಳು ಕಳೆದರೂ ಕೂಡ ಸರ್ವ ಶ್ರೇಷ್ಠ ಹಾಗೂ ಸರ್ವ ವ್ಯಾಪಿಯಾದ ವಚನ ಸಾಹಿತ್ಯ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ ಎಂದು ಹರ್ಷವರ್ಧನ್ ಹೇಳಿದರು. ವಚನ ಸಾಹಿತ್ಯದ ಮೌಲ್ಯಗಳ ಕುರಿತು ಪ್ರವಚನ ನೀಡಿದ ಬಸವನಹಳ್ಳಿ ಮೊರಾರ್ಜಿ ದೇಸಾಯಿ ಪಿಯು ಕಾಲೇಜಿನ ಕನ್ನಡ ಉಪನ್ಯಾಸಕ ಶಿವಕುಮಾರ್, ಬಸವಣ್ಣನ ವಚನಗಳು ಸಾರ್ವಕಾಲಿಕವಾದ ಮೌಲ್ಯ ಗಳೊಂದಿಗೆ ಮನುಷ್ಯನನ್ನು ಪರಿಶುದ್ಧತೆಯತ್ತ ಕೊಂಡೊಯ್ಯುತ್ತವೆ. ವಚನಗಳ ಅರಿವು ಮನುಷ್ಯನ ಅಂತರAಗವನ್ನು ಶುದ್ಧಿ ಮಾಡುತ್ತವೆ. ಹಾಗಾಗಿ ವಿದ್ಯಾರ್ಥಿಗಳು ವಚನ ಸಾಹಿತ್ಯದ ಪ್ರಜ್ಞೆಯನ್ನು ಮೈಗೂಡಿಸಿ ಕೊಳ್ಳಬೇಕು ಎಂದು ಹೇಳಿದರು.
ವಚನ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷ ಕೆ.ಎಸ್. ಮೂರ್ತಿ ಪ್ರಾಸ್ತಾವಿಕ ನುಡಿಗಳಾಡಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪಿ.ಆರ್. ವಿಜಯ್ ಮಾತನಾಡಿ, ಪ್ರಪಂಚದ ಮೊದಲ ಸಂಸತ್ತು ಆದ ಹನ್ನೆರಡನೇ ಶತಮಾನದ ಅನುಭವ ಮಂಟಪ ಎಂಬ ವಿಶ್ವವಿದ್ಯಾಲಯದಲ್ಲಿ ರಚನೆಗೊಂಡ ಶರಣರ ವಚನಗಳು ಮನುಷ್ಯನ ಶಾಂತಿ, ಸಮಾಧಾನ ಹಾಗೂ ಸಹಬಾಳ್ವೆಯ ಜೀವನಕ್ಕೆ ಅಡಿಪಾಯವಾಗಿವೆ. ಹಾಗಾಗಿ ಪ್ರತಿಯೊಬ್ಬರು ವಚನಗಳ ಸಾರವನ್ನು ಅರಿಯಬೇಕು. ಯಾವುದೇ ನೆಲೆಗಟ್ಟು ಗಳಿಲ್ಲದ ಜಾತಿ, ಧರ್ಮಗಳನ್ನು ಮೀರಿದ ಮಾನವೀಯತೆಯನ್ನು ಮೈಗೂಡಿಸಿಕೊಳ್ಳಬೇಕೆಂದು ವಿಜಯ್ ಕರೆಕೊಟ್ಟರು.
ವಿದ್ಯಾರ್ಥಿಗಳಾದ ಅಫೀಫಾ, ಪ್ರಿಯದರ್ಶಿನಿ, ತನಿಷಾ, ಹೇಮಾವತಿ ವಚನ ಗಾಯನ ನಡೆಸಿಕೊಟ್ಟರು. ಕಾಲೇಜು ಉಪನ್ಯಾಸಕಿ ಕೆ.ಬಿ. ಗೌರಿ ನಿರೂಪಿಸಿದರು. ರಾಜಸುಂದರA ಸ್ವಾಗತಿಸಿ, ಚನ್ನಬಸಪ್ಪ ವಂದಿಸಿದರು.